ವಿಜಯಸಾಕ್ಷಿ ಸುದ್ದಿ, ಗದಗ: ಒಳ ಮೀಸಲಾತಿ ಜಾರಿ ನಿರ್ಧಾರವು ಕೇವಲ ತಾತ್ಕಾಲಿಕ ಪರಿಹಾರವಾಗಿದ್ದು, ಶೇ.50ರಷ್ಟು ಮೀರಬಾರದು. ಈ ವಿಷಯದಲ್ಲಿ ಸರ್ಕಾರ ಗಮನ ನೀಡಬೇಕು ಎಂದು ದಲಿತ ಮುಖಂಡ ಮೋಹನದಾಸ ಅಲಮೇಲಕರ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮೋಹನದಾಸ್ ಕಮಿಟಿ ವರದಿಯನ್ನು ಸಮರ್ಪಕವಾಗಿ ಜಾರಿಗೊಳಿಸದೆ ಸರ್ಕಾರ ಸಣ್ಣ, ದಲಿತ ಮತ್ತು ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಪ್ರಸ್ತುತ ಒಳ ಮೀಸಲಾತಿ ಹಂಚಿಕೆಯಿಂದಾಗಿ ಒಟ್ಟು ಮೀಸಲಾತಿ ಪ್ರಮಾಣ ಶೇ.50ರ ಗಡಿ ದಾಟಿದೆ. ಇದು ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಸವಾಲುಗಳಿಗೆ ಕಾರಣವಾಗಬಹುದು ಎಂದರು.
ಇತರ ಸಮುದಾಯಗಳು ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದರೆ, ಈ ಸಂಪೂರ್ಣ ಪ್ರಕ್ರಿಯೆ ಮತ್ತೆ ಗೊಂದಲಮಯವಾಗಬಹುದು. ಆದ್ದರಿಂದ, ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಸರಿಪಡಿಸಿ ಕಾನೂನು ತೊಡಕುಗಳಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ದಲಿತ ಮುಖಂಡ ಮಂಜು ಬುರುಡಿ ಮಾತನಾಡಿ, ಮಾದಿಗ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಶೇ.7ರಷ್ಟು ಮೀಸಲಾತಿ ಸಿಗಬೇಕಿತ್ತು. ಆದರೆ ರಾಜ್ಯ ಸರ್ಕಾರ ನಮ್ಮ ಸಮುದಾಯಕ್ಕೆ ಕೇವಲ ಶೇ.6 ಮೀಸಲಾತಿ ನೀಡಿ ದೊಡ್ಡ ಅನ್ಯಾಯ ಮಾಡಿದೆ ಎಂದರು.
ಮುಖಂಡರಾದ ಅಶೋಕ ಕುಡತಿನ್ನಿ, ಚಂದ್ರು ಹರಿಜನ, ಉಡಚಪ್ಪ ಹಳ್ಳಿಕೇರಿ, ಸತೀಶ ಪಾಸಿ, ಡಿ.ಜಿ. ಕಟ್ಟಿಮನಿ, ಬಸವರಾಜ ಮುಳ್ಳಾಳ, ನಿಂಗಪ್ಪ ದೊಡ್ಡಮನಿ, ಮಂಜುನಾಥ ಗಜಾಕೋಶ, ಗಣೇಶ ಹುಬ್ಬಳ್ಳಿ, ರಾಘವೇಂದ್ರ ಪರಾಪೂರ, ಪುಂಡಲೀಕ ಕಲ್ಮನಿ, ಶೇಖಪ್ಪ ಮಾದರ, ಶಿವು ಪೂಜಾರ, ಮರಿಯಪ್ಪ ಮುಂತಾದವರು ಉಪಸ್ಥಿತರಿದ್ದರು.