ಗುತ್ತಿಗೆದಾರರಿಂದ ದಲಿತರಿಗೆ ಅನ್ಯಾಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರವಾದ ವತಿಯಿಂದ ದಲಿತ ವಿರೋಧಿ ಗುತ್ತಿಗೆದಾರರ ವಿರುದ್ಧ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಬಾಲರಾಜ ಅರಬರ ಮಾತನಾಡಿ, ಗದಗ-ಬೆಟಗೇರಿಯ ಮುಳಗುಂದ, ಶೀತಲಹರಿ ಹಾಗೂ ವಡ್ಡರಬಸಾಪೂರಗಳ ವಿವಿಧ ಕೊಳಗೇರಿ ನಿವಾಸಿಗಳಿಗೆ ಮನೆ ಕಾಮಗಾರಿಗೆ ಸಂಬಂಧಪಟ್ಟಂತೆ ಗುತ್ತಿಗೆದಾರರು ಅನ್ಯಾಯ ಮಾಡುತ್ತಿದ್ದಾರೆ. 479 ಮನೆ ಕಾಮಗಾರಿ ಕೈಗೆತ್ತಿಗೊಂಡ ಗುತ್ತಿಗೆದಾರರು 5 ವರ್ಷ ಕಳೆಯುತ್ತಾ ಬಂದರೂ ಒಂದು ಮನೆಯ ಕಾಮಗಾರಿಯನ್ನೂ ಪೂರ್ತಿಗೊಳಿಸಿಲ್ಲ. 479 ಮನೆಗಳ ಪೈಕಿ ಕೇವಲ 375 ಮನೆಗಳನ್ನು ಮಾತ್ರ ನಿರ್ಮಿಸುತ್ತಿದ್ದಾರೆ. ಅಲ್ಲದೆ, 356 ಮನೆಗಳಿಗೆ ಕಾಮಗಾರಿ ಮುಗಿಸಿದ ಬಿಲ್ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಈ ವಿಷಯದ ಕುರಿತು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು.

ಅಪೂರ್ಣಗೊಂಡ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸದಿದ್ದರೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಾಲಯಕ್ಕೆ ಬೀಗ ಜಡಿದು ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ ಗೋಕಾವಿ, ದಲಿತ ಕಲಾ ಮಂಡಳಿಯ ಅಧ್ಯಕ್ಷರಾದ ಶರೀಫ ಬಿಳೆಯಲಿ, ಆನಂದ ಶಿಂಗಾಡಿ, ಮುತ್ತು ಬಿಳೆಯಲಿ, ಮುತ್ತಪ್ಪ ಭಜಂತ್ರಿ, ಕೆಂಚಪ್ಪ ಮ್ಯಾಗೇರಿ, ಯಶವಂತ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಮಾರುತಿ ಅಂಗಡಿ, ವೆಂಕಟೇಶ ಡಂಬರ, ಪುನೀತ ತಮ್ಮಣ್ಣವರ, ಮಂಜುಳಾ ಶಿಂಗಾಡಿ, ರೇಣವ್ವ ವಡ್ಡರ, ದುರಗವ್ವ ವಡ್ಡರ, ಕುಮಾರ ಕಮತರ, ಗಿರೀಶ ಮುಗಲಾನಿ, ವೆಂಕಟೇಶ ಕೋಣಿ ಹಾಗೂ ಶೀತಲಹರಿ, ವರ‍್ಡಬಸಾಪೂರದ, ಮುಳಗುಂದ ಗ್ರಾಮದ ಹಿರಿಯರು ಇದ್ದರು.

ಮುತ್ತಪ್ಪ ಭಜಂತ್ರಿ ಮಾತನಾಡಿ, ಈ ಹಿಂದೆ ಹಲವು ಬಾರಿ ಗುತ್ತಿಗೆದಾರರ ವಿರುದ್ಧ ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಅಧಿಕಾರಿಗಳ ಮಾತಿಗೆ ಕಿಮ್ಮತ್ತು ಇಲ್ಲದ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಒಂದು ವಾರದೊಳಗೆ ಅಧಿಕಾರಿಗಳನ್ನು ಕರೆಯಿಸಿ ಮನೆಯ ಕಾಮಗಾರಿಯ ಕೆಲಸವನ್ನು ಪೂರ್ಣಗೊಳಿಸಿಕೊಡಬೇಕೆಂದು ಹೇಳಿದರು.


Spread the love

LEAVE A REPLY

Please enter your comment!
Please enter your name here