ಅಲೆಮಾರಿ ಸಮುದಾಯಗಳಿಗೆ ಅನ್ಯಾಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸುಪ್ರೀಂಕೋರ್ಟ್ ನಿರ್ದೇಶನದಂತೆ ಜಾರಿಯಾದ ಒಳಮೀಸಲಾತಿಯು ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಅಲೆಮಾರಿ ಸಮುದಾಯಗಳ ಮುಖಂಡ ಹನುಮಂತಪ್ಪ ಸಂಜೀವಸ್ವಾಮಿ ಆರೋಪಿಸಿದರು.

Advertisement

ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಾಗಮೋಹನದಾಸ ಆಯೋಗಕ್ಕೆ ಪರಿಶಿಷ್ಟ ಜಾತಿಯಲ್ಲಿರುವ ಕೆಳಮಟ್ಟದ ಸಮುದಾಯಗಳ ಸ್ಥಿತಿಗತಿ ಮತ್ತು ಅಂಕಿ-ಅಂಶಗಳ ಆಧಾರದ ಮೇಲೆ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿತ್ತು. ವರದಿಯ ಉದ್ದೇಶವು ಕೆಳ ಸಮುದಾಯದವರಿಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸುವುದಾಗಿತ್ತು, ಆದರೆ, ಅನೇಕ ಅಲೆಮಾರಿ ಸಮುದಾಯಗಳಿಗೆ ಆಧಾರ್ ಕಾರ್ಡ್ಗಳು ಇಲ್ಲದಿರುವುದರಿಂದ ನಿಖರವಾದ ಅಂಕಿ ಅಂಶಗಳನ್ನು ಸಂಗ್ರಹಿಸಲು ಕಷ್ಟವಾಗಿದೆ. ಲಭ್ಯವಿರುವ ಅಂಕಿ ಅಂಶಗಳ ಆಧಾರದ ಮೇಲೆ ವರದಿ ಸಿದ್ಧಪಡಿಸಲಾಗಿದೆ. ಈ ವರದಿಯು ಅಲೆಮಾರಿಗಳ ಶೋಚನೀಯ ಸ್ಥಿತಿಯನ್ನು ಎತ್ತಿ ಹಿಡಿದರೂ, ಮೀಸಲಾತಿಯನ್ನು ಕೇವಲ ಶೇ. 1ಕ್ಕೆ ಸೀಮಿತಗೊಳಿಸಿರುವುದರಿಂದ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದರು.

ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ದುರಗಪ್ಪ ವಿಭೂತಿ ಮಾತನಾಡಿ, ಒಳಮೀಸಲಾತಿ ಜಾರಿಯಿಂದ ಅಲೆಮಾರಿ ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಆ. 31ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಗದಗ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ 49 ಸಮುದಾಯದ ಜನ ತಮ್ಮ ವೇಷ-ಭೂಷಣದೊಂದಿಗೆ ಕುಟುಂಬದ ಸದಸ್ಯರೊಂದಿಗೆ ಭಾಗಿಯಾಗಲಿದ್ದಾರೆ. ನಮ್ಮ ಹೋರಾಟಕ್ಕೆ ಅನೇಕ ದಲಿತ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹನುಮಂತಪ್ಪ ಕಟ್ಟೆಣ್ಣವರ, ರಮೇಶ ಗಂಗಾಪುತ್ರ, ಹನುಮಂತಪ್ಪ ಆಸಂಗಿ, ದುರ್ಗೇಶ ವಿಭೂತಿ, ನರಸಿಂಹಮೂರ್ತಿ, ಯಲ್ಲಪ್ಪ ಒಂಟೆತ್ತಿನ, ದೇವಪ್ಪ ಶೇಷಗಿರಿ, ಲಕ್ಷ್ಮಣ ಡೊಕ್ಕಣ್ಣವರ, ಯಲ್ಲಪ್ಪ ಗೊಲ್ಲರ, ಅಶೋಕ ಗಡದವರ, ಜಂಬಣ್ಣ ದುರಮುರಗಿ, ತಿಮ್ಮಣ್ಣ ಚಿಮ್ಮನಕಟ್ಟಿ ಇತರರು ಉಪಸ್ಥಿತರಿದ್ದರು.

ರಾಜ್ಯ ಸರಕಾರ ಅಸ್ಪೃಶ್ಯ ಸಮುದಾಯಗಳನ್ನು ಪ್ರತ್ಯೇಕಿಸಿ ಅವರಿಗೆ ಸೂಕ್ತ ಪ್ರಮಾಣದಲ್ಲಿ ಒಳಮೀಸಲಾತಿ ನೀಡಬೇಕಿದೆ. ಕನಿಷ್ಠ ಶೇ. 3ರಷ್ಟು ಮೀಸಲಾತಿಯನ್ನು ಕೊಡಬೇಕು ಎಂದು ಹನುಮಂತಪ್ಪ ಸಂಜೀವಸ್ವಾಮಿ ಒತ್ತಾಯಿಸಿದರು.


Spread the love

LEAVE A REPLY

Please enter your comment!
Please enter your name here