ವಿಜಯಸಾಕ್ಷಿ ಸುದ್ದಿ, ಅಜ್ಜಂಪುರ: ಮನುಷ್ಯ ಜೀವನದಲ್ಲಿ ಒಂದು ನಿಶ್ಚಿತ ಗುರಿ ಮತ್ತು ಒಬ್ಬ ಶ್ರೇಷ್ಠ ಗುರುವಿನ ಮಾರ್ಗದರ್ಶನ ಬೇಕು. ಭೌತಿಕ ಜೀವನ ಶ್ರೀಮಂತಗೊಂಡರಷ್ಟೇ ಸಾಲದು, ಆಂತರಿಕ ಜೀವನ ಪರಿಶುದ್ಧಗೊಳಿಸಲು ಗುರುವಿನ ಅವಶ್ಯಕತೆ ಬಹಳಷ್ಟಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ತಾಲೂಕಿನ ಬುಕ್ಕಾಂಬುಧಿ ಬೆಟ್ಟದಲ್ಲಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳವರ ಲಿಂಗ ಬೆಳಗಿನ 89ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಹುಟ್ಟಿದ ವ್ಯಕ್ತಿಗೆ ಮರಣ ನಿಶ್ಚಿತ. ಹುಟ್ಟು-ಸಾವುಗಳ ಮಧ್ಯದ ಬದುಕು ಆದರ್ಶವಾಗಿರಬೇಕು. ಸಂಸ್ಕಾರ ಸದ್ವಿಚಾರಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳಲು ಸಾಧ್ಯ. ಪೆಟ್ಟು ತಿಂದ ಕಲ್ಲು ಸುಂದರ ಮೂರ್ತಿಯಾಗುತ್ತದೆ. ಪೆಟ್ಟು ಕೊಟ್ಟ ಸುತ್ತಿಗೆ ಸುತ್ತಿಗೆಯಾಗಿಯೇ ಉಳಿಯುತ್ತದೆ. ನೋವು ಕೊಡುವವರು ಹಾಗೆಯೇ ಉಳಿಯುತ್ತಾರೆ. ನೋವನ್ನು ಉಂಡವರು ಜ್ಞಾನಿಗಳಾಗುತ್ತಾರೆ. ಶೀಲ, ಶೌರ್ಯ, ಚಟುವಟಿಕೆ, ಪಾಂಡಿತ್ಯ, ಮಿತ್ರ ಸಂಗ್ರಹ ಕಳ್ಳರು ಕದಿಯಲಾರದ ಅಕ್ಷಯ ನಿಧಿಗಳು. ಇವುಗಳನ್ನು ಸಂಪಾದಿಸಲು ಸದಾ ಮನುಷ್ಯ ಶ್ರಮಿಸಬೇಕಾಗುತ್ತದೆ.
ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಪರಿವರ್ತನಾಶೀಲ ಸಮಾಜ ನಿರ್ಮಾಣಕ್ಕೆ ಮಾಡಿದ ತಪಸ್ಸು ಮತ್ತು ಕೊಟ್ಟ ಸಂದೇಶ ಯಾವಾಗಲೂ ಮರೆಯಲು ಸಾಧ್ಯವಿಲ್ಲ. ಅಂಗ ಅವಗುಣಗಳನ್ನು ದೂರ ಮಾಡಿ ಲಿಂಗ ಗುಣ ಬೆಳೆಸಿದ ಯುಗಪುರುಷರು ಲಿಂ. ಶ್ರೀ ಸಿದ್ಧಲಿಂಗ ಜಗದ್ಗುರುಗಳು. ಅವರು ಬುಕ್ಕಾಂಬುಧಿ ಬೆಟ್ಟಕ್ಕಾಗಮಿಸಿ 100 ವರುಷ ಪೂರ್ಣಗೊಂಡಿದೆ. ಮುಂದೆ ಶುಭಾಗಮನದ ಶತಮಾನೋತ್ಸವ ಸಮಾರಂಭವನ್ನು ಅವರು ತಪಗೈದ ಬುಕ್ಕಾಂಬುಧಿ ತಪೋಕ್ಷೇತ್ರದಲ್ಲಿ ಆಚರಿಸುವ ಸತ್ಯ ಸಂಕಲ್ಪ ಟ್ರಸ್ಟ್ ಹೊಂದಿದೆ. ಈ ಮಹತ್ಕಾರ್ಯಕ್ಕೆ ಸರ್ವರ ಸಹಕಾರ ಅಗತ್ಯವೆಂದರು.
ನೇತೃತ್ವ ವಹಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಆಧುನಿಕ ಕಾಲದಲ್ಲಿ ಸಂಬಂಧಗಳು ಕಣ್ಮರೆಯಾಗುತ್ತಿವೆ. ಧಾರ್ಮಿಕ ಸಂಸ್ಕಾರದ ಪರಿಪಾಲನೆಯಿಂದ ಬದುಕು ಉತ್ಕೃಷ್ಟಗೊಳ್ಳಲು ಸಾಧ್ಯವಾಗುತ್ತದೆ. ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಬುಕ್ಕಾಂಬುಧಿ ಕ್ಷೇತ್ರದಲ್ಲಿ ತಪಸ್ಸು ಮಾಡಿ ನಮ್ಮೆಲ್ಲರಿಗೂ ಆದರ್ಶ ದಾರಿ ತೋರಿಸಿದ್ದಾರೆ ಎಂದರು.
ಸಮ್ಮುಖ ವಹಿಸಿದ ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸುಖ ಬಯಸುವ ಮನುಷ್ಯ ಧರ್ಮ ಪಾಲನೆ ಮಾಡಲು ಹಿಂಜರಿಯುತ್ತಾನೆ. ದುಃಖ ಯಾರಿಗೂ ಬೇಕಾಗಿಲ್ಲ. ಸತ್ಯ ಶುದ್ಧ ಸೈದ್ಧಾಂತಿಕ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಳ್ಳಬೇಕು. ಆದರ್ಶ ಬದುಕಿಗಾಗಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಶ್ರಮಿಸಿದರು ಎಂದರು.
ಈ ಪವಿತ್ರ ಸಮಾರಂಭದಲ್ಲಿ ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು, ಯಲಬುರ್ಗಾ ಹಾವಗಿ ಲಿಂಗೇಶ್ವರ ಶಿವಾಚಾರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ರಟ್ಟೀಹಳ್ಳಿ ಶಿವಲಿಂಗ ಶಿವಾಚಾರ್ಯರು, ಕಡೆನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾಗಿ ಬುಕ್ಕಾಂಬುಧಿ ಕೆ.ಆರ್. ಚಂದ್ರಶೇಖರಪ್ಪ, ಶಿವಮೊಗ್ಗದ ರತ್ನಮ್ಮ ಮಂಜುನಾಥ ಉಪಸ್ಥಿತರಿದ್ದು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ಹಣ್ಣೆ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ಪ್ರಾಸ್ತಾವಿಕ ನುಡಿದರು. ಹೆಚ್.ಪಿ. ಮಲ್ಲಿಕಾರ್ಜುನ ಸ್ವಾಗತಿಸಿದರು. ಬೀರೂರು ರುದ್ರಮುನಿ ಶಿವಾಚಾರ್ಯರು ನಿರೂಪಿಸಿದರು. ಚನ್ನಗಿರಿ ಡಾ.ಕೇದಾರ ಶಿವಶಾಂತವೀರ ಶಿವಾಚಾರ್ಯರು ಪ್ರಾರ್ಥನೆ ಹಾಡಿದರು. ಶ್ರೀ ಮದುಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟಿನ ಉಪಾಧ್ಯಕ್ಷ ಎಸ್.ಎಮ್. ವೀರಭದ್ರಪ್ಪ ವಂದನಾರ್ಪಣೆ ಮಾಡಿದರು. ಕಾರ್ಯದರ್ಶಿ ಹೆಚ್.ಪಿ. ಸುರೇಶ ಸೇರಿದಂತೆ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.
ತರೀಕೆರೆ ಕ್ಷೇತ್ರದ ಶಾಸಕರಾದ ಜಿ.ಎಚ್. ಶ್ರೀನಿವಾಸ ಮಾತನಾಡಿ, ನಿರ್ಮಾಣಗೊಳ್ಳುತ್ತಿರುವ ಯಾತ್ರಿ ನಿವಾಸಕ್ಕೆ 5 ಲಕ್ಷ ರೂ. ಅನುದಾನ ಕೊಡುವುದಾಗಿ ಘೋಷಿಸಿದರು. ಶಿವಮೊಗ್ಗದ ದಿವ್ಯ ಪ್ರೇಮ 1 ಲಕ್ಷ ರೂ. ಮಹಾಲಿಂಗ ಶಾಸ್ತಿçಗಳು 51 ಸಾವಿರ, ರಟ್ಟೀಹಳ್ಳಿ ಶ್ರೀಗಳು 25 ಸಾವಿರ ರೂ. ವಾಗ್ದಾನ ಮಾಡಿದರು. ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಸಮಾರಂಭ ಉದ್ಘಾಟಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಭವ ಬಂಧನದಿAದ ಮುಕ್ತಗೊಳಿಸುವ ಶಕ್ತಿ ಗುರುವಿಗೆ ಇದೆ. ಮೌನ ಮನಸ್ಸು ಶುದ್ಧಿ ಮಾಡುತ್ತದೆ. ಧ್ಯಾನ ಬುದ್ಧಿ ಶುದ್ಧಿ ಮಾಡುತ್ತದೆ. ಪ್ರಾರ್ಥನೆ ಆತ್ಮ ಶುದ್ಧಿ ಮಾಡುತ್ತದೆ. ಈ ಮಹತ್ತರ ಗುರಿಯಿಟ್ಟು ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಲೋಕ ಕಲ್ಯಾಣಕ್ಕಾಗಿ ತಪಸ್ಸು ಮಾಡಿದ್ದನ್ನು ನಾವು ಯಾರೂ ಮರೆಯಬಾರದೆಂದರು.