ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಗೊಜನೂರ ಗ್ರಾಮದ ಮುಗ್ಧ ರೈತನೋರ್ವ ತಾನೇ ಕಷ್ಟಪಟ್ಟು ಬಿತ್ತಿ, ಬೆಳೆದು ಸಂರಕ್ಷಿಸಿದ ಹತ್ತಿ ಬೆಳೆಗೆ ತನ್ನ ಕೈಯಾರ ಕಳೆನಾಶಕ ಸಿಂಪಡಿಸಿ ಬೆಳೆ ಹಾಳು ಮಾಡಿಕೊಂಡ ಘಟನೆ ಜರುಗಿದೆ. ಶಿಕ್ಷಣದ ಕೊರತೆ, ತಪ್ಪು ಮಾಹಿತಿ, ತಪ್ಪು ಕಲ್ಪನೆಯಿಂದ ಕೀಟನಾಶಕದ ಬದಲಾಗಿ ತಾನೇ ಬೆಳೆದ ಸಮೃದ್ಧ ಬೆಳೆಗೆ ಕಳೆನಾಶಕ ಸಿಂಪಡಿಸಿ ಈಗ ಮರುಗುತ್ತಿದ್ದಾನೆ.
ಗೊಜನೂರ ಗ್ರಾಮದ ಹಿರಿಯ ರೈತ ತಾಜುದ್ದೀನ ಆನಿ ಎಂಬ ರೈತ ತನ್ನ 6 ಎಕರೆ ಜಮೀನಿನಲ್ಲಿ 3 ಎಕರೆ ಗೋವಿನಜೋಳ, 3 ಎಕರೆ ಹತ್ತಿ ಬಿತ್ತನೆ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಕೃಷಿ ಕೂಲಿಕಾರರ ಕೊರತೆಯಿಂದ ರೈತರು ಕಳೆನಾಶಕಕ್ಕೆ ಮೊರೆ ಹೋಗಿದ್ದಾರೆ. ಅದರಂತೆ ಇವರೂ ಸಹಿತ ಗೋವಿನ ಜೋಳದಲ್ಲಿನ ಕಳೆ ನಿಯಂತ್ರಣಕ್ಕಾಗಿ ಲಕ್ಷ್ಮೇಶ್ವರದ ಕೃಷಿ ಪರಿಕರ ಮಾರಾಟದ ಅಂಗಡಿಯಿಂದ ಕಳೆ ನಾಶಕ ಕೇಳಿ ತಂದಿದ್ದಾರೆ. ಗೋವಿನ ಜೋಳದ ಬೆಳೆಯಲ್ಲಿ ಸಿಂಪರಣೆ ಮಾಡಿ ಉಳಿದ ಕಳೆನಾಶಕವನ್ನೇ 3 ಎಕರೆ ಹತ್ತಿ ಬೆಳೆಗೆ ಸಿಂಪರಣೆ ಮಾಡಿದ್ದಾರೆ.
ಸಿಂಪರಣೆಯ ನಾಲ್ಕು ದಿನದ ನಂತರ ಬೆಳೆ ಒಣಗಿರುವುದು ಗೊತ್ತಾಗಿದೆ. ಆದರೆ ಇದಕ್ಕೆ ಯಾರನ್ನೂ ದೂಷಿಸಲಾಗದೇ ಒಳಗೊಳಗೆ ಸಂಕಟ ಪಟ್ಟುಕೊಳ್ಳುವ ಪರಿಸ್ಥಿತಿ ರೈತನದ್ದಾಗಿದೆ. ಇಷ್ಟೇ ಅಲ್ಲದೆ, ಕಳೆನಾಶಕ ಸಿಂಪರಣೆಯಿಂದ ಪಕ್ಕದ ಹೊಲದ ಒಂದಷ್ಟು ಹೆಸರು ಬೆಳೆ ಹಾಳಾಗಿ ಅದಕ್ಕೂ ದಂಡ ತೆತ್ತಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿದ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಕೃಷಿ ಕೂಲಿಕಾರರ ಕೊರತೆಯ ಕಾರಣದಿಂದ ರೈತರು ಅತಿಯಾದ ಕಳೆನಾಶಕದ ಬಳಕೆ ಮಾಡುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಬೆಳೆ ರಕ್ಷಣೆಯ ಅನಿವಾರ್ಯತೆಯ ನಡುವೆ ಕಳೆನಾಶಕ ಸಿಂಪರಣೆ ಮಾಡುವ ಮೊದಲು ಕೃಷಿ ಅಧಿಕಾರಿಗಳು, ನುರಿತ/ಅಧಿಕೃತ ಕೃಷಿ ಪರಿಕರ ಮಾರಾಟಗಾರರು, ವಿದ್ಯಾವಂತ ಪ್ರಗತಿಪರ ರೈತರ ಸಲಹೆ-ಸೂಚನೆ ಪಡೆಯಬೇಕು.
ಕಳೆ ನಾಶಕದಿಂದ ಬೆಳೆಹಾನಿಯಾದರೆ ಯಾವುದೇ ಪರಿಹಾರ/ಸಹಾಯಧನ ಸಿಗಲಾರದು. ಕಳೆ ನಾಶದ ಜತೆಗೆ ಭೂಮಿಯಲ್ಲಿನ ಬೆಳೆ ಪೋಷಕ ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡುತ್ತದೆ. ಅತಿಯಾದ ಕಳೆನಾಶಕದಿಂದ ಅಳಿಲು, ಹಾವು, ಮೊಲ, ಬೆಕ್ಕು, ಪಕ್ಷಿ ಸಂಕುಲಕ್ಕೆ ಕಂಟಕವಾಗುತ್ತಿದೆ. ಕೃಷಿಯೂ ಒಂದು ವಿಜ್ಞಾನವೇ ಆಗಿದೆ. ಅರಿತು ಬಳಕೆ ಮಾಡಬೇಕು ಎಂದರು.
ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳಲಾಗದ ಅವಿದ್ಯಾವಂತ, ಮುಗ್ಧ ರೈತರರಿಗೆ ಕೃಷಿ ಇಲಾಖೆ ತಿಳುವಳಿಕೆ, ಜಾಗೃತಿ ಮೂಡಿಸುವ ಕಾರ್ಯಕ್ರಮಗಳಾಗಬೇಕು. ಭವಿಷ್ಯದ ದೃಷ್ಟಿಯಿಂದ ಕ್ರಿಮಿನಾಶಕ, ಕಳೆನಾಶಕದ ಬದಲಾಗಿ ಜೈವಿಕ ಸಂಶೋಧನೆ, ಮಾರ್ಗೋಪಾಯ ಕಂಡುಕೊಳ್ಳಬೇಕಾಗಿದೆ. ಸಾವಯುವ ಕೃಷಿಗೆ ಸರ್ಕಾರ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ರೈತ ಚನ್ನಪ್ಪ ಷಣ್ಮುಕಿ ಮನವಿ ಮಾಡಿಕೊಂಡಿದ್ದಾರೆ.



