ವಿಜಯಸಾಕ್ಷಿ ಸುದ್ದಿ, ಡಂಬಳ: ಕಪ್ಪತ್ತಗುಡ್ಡವೆಂದರೆ, ಹಸಿರು ಜಗತ್ತು ಎನ್ನುವಂತೆ ಭಾಸವಾಗುತ್ತದೆ. ಅರಣ್ಯ ಇಲಾಖೆ ಮಳೆಗಾಲದಲ್ಲಿ 10 ಸಾವಿರಕ್ಕೂ ಹೆಚ್ಚು ವಿವಿಧ ಮಾದರಿಯ ಬೀಜದುಂಡೆಗಳನ್ನು ಕಪ್ಪತ್ತಗುಡ್ಡ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ನೀಡಿ, ಕಪ್ಪತ್ತಗುಡ್ಡದಾದ್ಯಂತ ಪಸರಿಸುವ ಮೂಲಕ ಪರಿಸರ ವೃದ್ಧಿಸುವ ಯೋಜನೆ ಹಮ್ಮಿಕೊಂಡಿತ್ತು. ಅಲ್ಲದೆ, 1.50 ಲಕ್ಷ ಸಸಿಗಳನ್ನು ನೆಡುವುದರ ಮೂಲಕ ಹೊಸ ಯೋಜನೆಗಳ ರೂವಾರಿ ಆರ್.ಎಫ್.ಒ ಮಂಜುನಾಥ ಮೇಗಲಮನಿ ಅವರ ಜೊತೆಗೆ ಸಿಬ್ಬಂದಿ ವರ್ಗದವರೂ ಕೈಜೋಡಿಸುತ್ತಿದ್ದಾರೆ.
ಗಾಳಿಗುಂಡಿ ಬೆಟ್ಟ ವಲಯದಲ್ಲಿ ವೃಕ್ಷ ಬಂಧನದ ಮೂಲಕ ಬೆಳೆಯುವ ಮರ-ಗಿಡ, ಬಳ್ಳಿಗಳ ಬೀಜಗಳನ್ನು ಬಳಸಿ ತಯಾರಿಸಿದ ಪ್ಲಾಸ್ಟಿಕ್ ಮುಕ್ತ ರಾಖಿಗಳನ್ನು ಕಪ್ಪತ್ತಗುಡ್ಡದ ಗಿಡ-ಮರಗಳಿಗೆ ಕಟ್ಟಿ ಮಳೆಯಿಂದ ರಾಖಿಗಳ ಬೀಜಗಳು ನೆಲಕ್ಕೆ ಬಿದ್ದು ಮೊಳಕೆಯೊಡೆದು ಕಪ್ಪತ್ತಗುಡ್ಡ ಇನ್ನಷ್ಟು ಹಸಿರಾಗಲಿ, ಜೀವ ಸೆಲೆಗೆ ಮುನ್ನುಡಿಯಾಗಲಿ ಎನ್ನುವ ವಿನೂತನ ಮಾದರಿಯನ್ನಂತೂ ಮೆಚ್ಚಲೇಬೇಕು.
ವಿಶೇಷ ವಿನ್ಯಾಸವನ್ನು ಆಧರಿಸಿ, ಸಿಮೆಂಟನ್ನು ಬಳಸಿ ದೊಡ್ಡ ಮರದ ತುಂಡಿನ ಆಕಾರದಲ್ಲಿ ಕಪ್ಪತ್ತಗುಡ್ಡದ ಪ್ರವೇಶದ್ವಾರದಲ್ಲಿ ಟಿಕೆಟ್ ಕೌಂಟರ್ ನಿರ್ಮಾಣ ಮಾಡಲಾಗಿದೆ. ಕಪ್ಪತ್ತಗುಡ್ಡಕ್ಕೆ ಬರುವ ಪ್ರವಾಸಿಗರಿಗೆ ಇದೊಂದು ವಿನೂತನ ಅನುಭವ. ಡೋಣಿ ಗ್ರಾಮದ ಪ್ರವೇಶದ್ವಾರದಲ್ಲಿರುವ ಟಿಕೆಟ್ ಕೌಂಟರ್ ಬಳಿ, ಪ್ರವಾಸಿಗರಿಗೆ ಪರಿಸರ ಸ್ನೇಹಿ ಬಣ್ಣವನ್ನು ಕೈಗೆ ಹಚ್ಚಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಆ ಬಣ್ಣದ ಕೈಯನ್ನು ಅಲ್ಲಿಯೇ ಪಕ್ಕದಲ್ಲಿ ಅಳವಡಿಸಲಾದ ಇಲಾಖೆಯ ಬೋರ್ಡ್ ಮೇಲೆ ಒತ್ತಿ ತಮ್ಮ ಗುರುತನ್ನು ಮೂಡಿಸಬೇಕು. ನಂತರ, ಬೋರ್ಡ್ನಲ್ಲಿ ಇರುವ ಕ್ಯೂಆರ್ ಕೋಡ್ ಸ್ಕಾನ್ ಮಾಡಿ ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡಿದ ತಕ್ಷಣ, ಅವರ ಹೆಸರಿನಲ್ಲಿರುವ ಪ್ರಮಾಣಪತ್ರವು ಅವರ ಮೊಬೈಲ್‌ಗೆ ಬರುತ್ತದೆ. ಈ ಪ್ರಮಾಣಪತ್ರದಲ್ಲಿ ಕಪ್ಪತ್ತಗುಡ್ಡದ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣಕ್ಕೆ ಸಹಕರಿಸುವ ಪ್ರತಿಜ್ಞೆ ಇರುತ್ತದೆ. ಇದು ಪ್ರವಾಸಿಗರಲ್ಲಿ ಹೆಮ್ಮೆಯ ಭಾವನೆ ಮೂಡಿಸುತ್ತಿದೆ.
ಕಪ್ಪತ್ತಗುಡ್ಡಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ, ಎರಡು ಹೊಸ ಸಫಾರಿ ವಾಹನಗಳು ಪ್ರವಾಸಿಗರಿಗೆ ಕಪ್ಪತ್ತಗುಡ್ಡದ ಪರಿಸರದಲ್ಲಿ ಸುಲಭವಾಗಿ ಸಂಚರಿಸಲು ಸಹಾಯಕವಾಗಿದೆ. ಪ್ರವಾಸಿಗರು ಆನ್‌ಲೈನ್ ಮೂಲಕವೇ ಸಫಾರಿ ಬುಕಿಂಗ್ ಮಾಡಿಕೊಳ್ಳಲು ಸೌಲಭ್ಯ ಕಲ್ಪಿಸಿರುವುದು ವಿಶೇಷ.
ಕಪ್ಪತ್ತಗುಡ್ಡದ ಭಾಗದಲ್ಲಿ ನೂರಾರು ವಿವಿಧ ಚಿಟ್ಟೆಗಳು ಕಂಡುಬರುತ್ತವೆ. ಅದರ ಆಧಾರದ ಮೇಲೆ ಪ್ರವಾಸಿಗರು ಕಪ್ಪತ್ತಗುಡ್ಡ ಪರಿಸರದತ್ತ ದೌಡಾಯಿಸಬೇಕು ಎಂಬ ಉದ್ದೇಶದಿಂದ ಚಿಟ್ಟೆಯಿಂದ ಪರಿಸರಕ್ಕೆ ಏನೆಲ್ಲ ಲಾಭವಿದೆ ಎನ್ನುವ ಫಲಕಗಳನ್ನು ಅಳವಡಿಸಿ ಪರಿಸರದ ಕಾಳಜಿ ಮೂಡಿಸಲಾಗುತ್ತಿದೆ. ಪ್ರವಾಸಿಗರು ದಾರಿ ತಪ್ಪಿಸಿಕೊಳ್ಳದೇ ಕಪ್ಪತ್ತಗುಡ್ಡ ತಲುಪಬೇಕು ಎನ್ನುವ ಹಿನ್ನೆಲೆಯಲ್ಲಿ ಪ್ರತಿ ಮುಖ್ಯ ರಸ್ತೆ ಮತ್ತು ಗ್ರಾಮೀಣ ಭಾಗಗಳಲ್ಲಿ ಕಪ್ಪತ್ತಗುಡ್ಡಕ್ಕೆ ತೆರಳುವ ವಿವಿಧ ಪ್ರಾಣಿಗಳ ಚಿತ್ರವಿನ್ಯಾಸವಿರುವ ಮಾರ್ಗಫಲಕಗಳನ್ನು ಬಹಳ ಸುಂದರವಾಗಿ ನಿರ್ಮಿಸಲಾಗಿದೆ.
ಕಪ್ಪತ್ತಗುಡ್ಡದಲ್ಲಿ ಸುಸ್ಥಿರ ಪರಿಸರ ಬೆಳೆಸಲು, ಪ್ರಾಣಿಗಳ ರಕ್ಷಣೆಗೆ ಮತ್ತು ಪ್ರವಾಸಿ ತಾಣವನ್ನಾಗಿ ಮಾಡುವಲ್ಲಿ ಅರಣ್ಯ ಇಲಾಖೆಯ ಹಿರಿಯ, ಅನುಭವಿ ಅಧಿಕಾರಿಗಳ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಇದರಿಂದ ಕಪ್ಪತ್ತಗುಡ್ಡಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಮಂಜುನಾಥ ಮೇಗಲಮನಿ
ಆರ್.ಎಫ್.ಓ, ಮುಂಡರಗಿ.
ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ, ಇಲ್ಲಿನ ವನ್ಯಜೀವಿಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವುದು, ಕಪ್ಪತ್ತಗುಡ್ಡ ಒಡಲಿನಲ್ಲಿರುವ ಹಾಗೂ ಸುತ್ತಮುತ್ತಲಿನ 93 ಕೆರೆಗಳ ಅಭಿವೃದ್ಧಿಗೆ ಒತ್ತು ಹಾಗೂ ಹೊಸ ಟ್ರೆಕಿಂಗ್ ಪಾಥ್ ಗುರುತಿಸಿ ಯುವ ಸಮುದಾಯವನ್ನು ಕಪ್ಪತ್ತಗುಡ್ಡದತ್ತ ಆಕರ್ಷಿಸಿ, ಯುವ ಜನತೆಯಲ್ಲಿ ಪರಿಸರ ಉಳಿಸಿ-ಬೆಳೆಸುವ ಪ್ರೇರಣೆಯನ್ನು ಅರಣ್ಯ ಇಲಾಖೆ ಹೆಚ್ಚಿಸುತ್ತಿದೆ.


