ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳ ಆಶ್ರಯದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶನಿವಾರ 8ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಧರಣಿ ನಿರತ ರೈತರು ಪಾಳಾ-ಬಾದಾಮಿ ರಸ್ತೆಯಲ್ಲಿ ಕುಳಿತು ಜೋಳದ ರೊಟ್ಟಿ ಊಟ ಮಾಡಿದರು.
ಪಟ್ಟಣದ ಹಳ್ಳದಕೇರಿ ಓಣಿಯ ನಾಗಪ್ಪ ಓಂಕಾರಿ, ಈರಪ್ಪ ಮಾಗಡಿ, ದುಂಡಪ್ಪ ಕೊಟಗಿ, ದೇವಪ್ಪ ಕರಿಯತ್ತಿನ, ಕೊಟ್ಟಪ್ಪ ಅಮರಶೆಟ್ಟಿ, ಶಿವನಗೌಡ ಅಡರಕಟ್ಟಿ, ದ್ಯಾಮಣ್ಣ ಕಮತದ, ಗಿರಿಜವ್ವ ಕರಿಯತ್ತಿನ, ಪ್ರೇಮವ್ವ ಹರಪನಹಳ್ಳಿ ಇವರು ಜೋಡೆತ್ತಿನ ಎರಡು ಚಕ್ಕಡಿಯಲ್ಲಿ ಜೋಳದ ಕಡಕ್ ರೊಟ್ಟಿ, ಬುತ್ತಿ, ಮಡಿಕಿ ಕಾಳು ಪಲ್ಯ, ಶೇಂಗಾ ಚಟ್ನಿ ಕಟ್ಟಿಕೊಂಡು ಧರಣಿನಿರತ ವೇದಿಕೆಗೆ ಆಗಮಿಸಿದ್ದರು. ನಂತರ ನಡು ರಸ್ತೆಯಲ್ಲೇ ತಾಡಪತ್ರಿ ಹಾಸಿಕೊಂಡು ಸಾಲಾಗಿ ಕುಳಿತು ರೈತರು ಊಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ರೈತರ ಊಟ ಮುಗಿಯುವವರೆಗೆ ಅರ್ಧ ತಾಸು ರಾಜ್ಯ ಹೆದ್ದಾರಿ ಸಂಚಾರ ಬಂದ್ ಆಗಿತ್ತು.
ಪಟ್ಟಣ ಹಾಗೂ ಬೇರೆ ಬೇರೆ ಊರುಗಳಿಂದ ಬಂದಿದ್ದ ರೈತರು, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಖಡಕ್ ರೊಟ್ಟಿ ಊಟ ಮಾಡಿದ್ದು ವಿಶೇಷವಾಗಿತ್ತು. ಚಂಬಣ್ಣ ಬಾಳಿಕಾಯಿ, ಸಿ.ಆರ್. ಲಕ್ಕುಂಡಿಮಠ, ಶರಣು ಗೋಡಿ, ಬಸವರಾಜ ಹಿರೇಮನಿ, ಸೋಮಣ್ಣ ಡಾಣಗಲ್ಲ, ವೀರಣ್ಣ ಪವಾಡದ, ಅಮರೇಶ ತೆಂಬದಮನಿ, ಜ್ಞಾನದೇವ ಬೋಮಲೆ, ಅಭಯ ಜೈನ್, ಪವನ್ ಬಂಕಾಪೂರ ಮತ್ತಿತರರು ಇದ್ದರು.
ಲಕ್ಷ್ಮೇಶ್ವರದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸುವವರೆಗೂ ಅಹೋರಾತ್ರಿ ಹೋರಾಟ ನಡೆಯಲಿದೆ ಎಂದು ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಎಂ.ಎಸ್. ದೊಡ್ಡಗೌಡ್ರ, ರವಿಕಾಂತ ಅಂಗಡಿ ತಿಳಿಸಿದ್ದಾರೆ.



