ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಆಗಸ್ಟ್ 11ರಿಂದ ಪ್ರಾರಂಭವಾಗಿರುವ ವಿಧಾನಸಭೆ ಅಧಿವೇಶನದಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಜಾಲವಾಡಗಿ ಏತ ನೀರಾವರಿ ಯೋಜನೆಯನ್ನು ಪ್ರಾರಂಭಿಸುವಂತೆ ಸಭಾಧ್ಯಕ್ಷರ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಮಾಡಿಕೊಂಡರು.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ಗದಗ-ಶಿರಹಟ್ಟಿ ಮತ್ತು ರೋಣ ಮತಕ್ಷೇತ್ರದಲ್ಲಿಯ 29 ಕೆರೆಗಳು ಮತ್ತು 2 ಚೆಕ್ ಡ್ಯಾಂ ನಿರ್ಮಾಣ ಮಾಡುವುದಕ್ಕೆ 197 ಕೋಟಿ ರೂ ಅನುಮೋದನೆ ನೀಡಲಾಗಿತ್ತು. 2022ರಲ್ಲಿ ಕಾಮಗಾರಿ ಪ್ರಾರಂಭವಾಗಿತ್ತಾದರೂ, 2023ರಲ್ಲಿ ಗುತ್ತಿಗೆದಾರರು ಕೆಲಸ ಮಾಡಲು ಆಗುತ್ತಿಲ್ಲವೆಂದು ಹೇಳುತ್ತಿದ್ದಾರೆ. ಇದರಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಸಭಾಧ್ಯಕ್ಷರ ಮೂಲಕ ಡಿಸಿಎಂ ಅವರ ಗಮನಕ್ಕೆ ತಂದಿದ್ದೇನೆ.
ಇದಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗುತ್ತಿಗೆದಾರರು ರೇಟ್ ವರ್ಕೌಟ್ ಆಗುತ್ತಿಲ್ಲವೆಂದು ಹೇಳಿದ್ದು, ಇದಕ್ಕೆ ರಿ-ಟೆಂಡರ್ ಕರೆಯುವುದಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮತ್ತು ರೋಣ ಶಾಸಕ ಜಿ.ಎಸ್.ಪಾಟೀಲ ಅವರು ಸಹ ಈ ಬಗ್ಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಆದಷ್ಟು ಶೀಘ್ರ ಯೋಜನೆ ಪ್ರಾರಂಭಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.