ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಲು ಗುರುವಾರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಗಜೇಂದ್ರಗಡ ತಾಲೂಕಿನ ನಿಡಗುಂದಿ ಮತ್ತು ಮಾರನಬಸರಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದರು.
ನಿಡಗುಂದಿ ಗ್ರಾಮದ ಸೊಬಗಿನ ಅವರ ಹೊಲದಿಂದ ಕೆಂಪಯ್ಯನವರ ಹೊಲದವರೆಗೆ 2.20 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಅಭಿವೃದ್ಧಿ ಕಾರ್ಯವನ್ನು ಪರಿಶೀಲಿಸಿದರು. ಈ ವೇಳೆ ರಸ್ತೆ ನಿರ್ಮಾಣದಲ್ಲಿ ಕ್ರಿಯಾಯೋಜನೆಯಂತೆ ರಸ್ತೆ ನಿರ್ಮಾಣ ಕಾರ್ಯ ನಡೆದಿದಿಯೇ ಎಂಬುದನ್ನು ಕಡತ ಪರಿಶೀಲಿಸಿ ತಿಳಿದುಕೊಂಡರು. ಬಳಿಕ ಗ್ರಾಮದ ಸಂಜೀವಿನಿ ವರ್ಕ್ ಶೆಡ್ ಮತ್ತು ಸಿಸಿ ರಸ್ತೆ ನಿರ್ಮಾಣ ಹಾಗೂ ಸರ್ಕಾರಿ ಕಾಲೇಜಿನಲ್ಲಿ ನಿರ್ಮಿಸಿದ ಪಿಂಕ್ ಶೌಚಾಲಯ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಗುಣಮಟ್ಟ ಅವಲೋಕಿಸಿದರು.
ಮಾರನಬಸರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾಮದಲ್ಲಿ ನಿರ್ಮಿಸಲಾದ ನೂತನ ಗ್ರಂಥಾಲಯ ಕಟ್ಟಡಕ್ಕೆ ಭೇಟಿ ನೀಡಿದರು. ಈ ವೇಳೆ ಗ್ರಂಥಾಲಯದ ಪುಸ್ತಕಗಳ ಸಂಗ್ರಹ ಕೋಣೆ, ಪಿಠೋಪಕರಣಗಳ ಗುಣಮಟ್ಟ, ಗ್ರಂಥಾಲಯದಲ್ಲಿ ತಂತ್ರಜ್ಞಾನ ಅಳವಡಿಕೆ ಕಾರ್ಯ ಸೇರಿದಂತೆ ಹಲವು ಮಾಹಿತಿಯನ್ನು ಗ್ರಂಥಪಾಲಕರಿಂದ ಪಡೆದುಕೊಂಡರು. ಬಳಿಕ ಗ್ರಾಮದ ಮೊಹರಂ ರಸ್ತೆ ಅಭಿವೃದ್ಧಿ, ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ನೂತನ ಶಾಲಾ ಕಟ್ಟಡವನ್ನು ಪರಿಶೀಲಿಸಿದರು.
ಬಳಿಕ ವಸತಿ ನಿಯಲದ ಕಟ್ಟಡ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆಯೇ ಎಂದು ತಿಳಿಯಲು ಸ್ವತಃ ವಿದ್ಯಾರ್ಥಿಗಳೊಂದಿಗೆ ಕ್ಲಾಸ್‌ನಲ್ಲಿ ಕುಳಿತು ಶಿಕ್ಷಕರ ಪಾಠ ಆಲಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಉಪಹಾರ ಸವಿದು ವಸತಿ ನಿಲಯದ ಆಹಾರ ಗುಣಮಟ್ಟ ಮತ್ತು ವಸತಿ ನಿಲಯದ ಕಟ್ಟಡ ಪರಿಶೀಲಿಸಿದರು. ಬಳಿಕ ತಾಲೂಕಿನ ಶಿಕ್ಷಕರಿಗೆ ಜಿಲ್ಲೆಯ ಫಲಿತಾಂಶ ಹೆಚ್ಚಿಸಲ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗಜೇಂದ್ರಗಡ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ, ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಫಣಿಬಂದ, ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕರು, ತಾಲೂಕಿನ ನರೇಗಾ ಸಿಬ್ಬಂದಿ ವರ್ಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ನರೇಗಾ ಕಾಮಗಾರಿಗಳ ಜೊತೆಗೆ ಭರತ್ ಎಸ್ ಅವರು ಸರ್ಕಾರಿ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಶೈಕ್ಷಣೀಕ ಚಟುವಟಿಕೆಗಳ ಬಗ್ಗೆ ಸಂವಾದ ನಡೆಸಿದರು. ಕಾಲಕಾಲೇಶ್ವರ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದದ ವೇಳೆ 9ನೇ ತರಗತಿಯಲ್ಲಿ ಶೇ.98 ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿನಿಯೊಬ್ಬಳು ಸಿಇಒ ಅವರ ಗಮನಸೆಳೆದಳು. ಈ ವೇಳೆ ವಿದ್ಯಾರ್ಥಿಗೆ ಸಿಇಒ ಅವರು, 10ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮಳಾಗಿ ತೇರ್ಗಡೆ ಹೊಂದುವಂತೆ ಹರಸಿದರು.