ಸಂಸದನಾಗಿಯೂ ಅಭಿವೃದ್ಧಿ ಕಾರ್ಯ ಮಾಡುವೆ : ಬೊಮ್ಮಾಯಿ

0
Inspection of development works at Shiggavi
Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ : ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ 100 ದಿನದ ಕಾರ್ಯಕ್ರಮ ಘೋಷಣೆ ಮಾಡಿ, ಅನುಷ್ಠಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಶಿಗ್ಗಾವಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ತರುವಾಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಮೈತ್ರಿ ಪಕ್ಷಗಳಿಗೆ ಹಾಗೂ ಆ ಪಕ್ಷಗಳಲ್ಲಿ ಅನುಭವ ಇರುವ ನಾಯಕರಿಗೆ ಆದ್ಯತೆ ಕೊಡುವ ಅಗತ್ಯವಿತ್ತು. ಅಲ್ಲದೇ, ಹಿಂದಿನ ಸರ್ಕಾರದಲ್ಲಿ ಕೆಲಸ ಮಾಡಿದ ಪ್ರಮುಖರೆಲ್ಲರಿಗೂ ಸಚಿವ ಸ್ಥಾನವನ್ನು ಮುಂದುವರೆಸಲಾಗಿದೆ. ಹೀಗಾಗಿ ನನಗೆ ಸಚಿವ ಸ್ಥಾನ ತಪ್ಪಿರಬಹುದು. ನನಗೆ ಅನುಭವವಿರುವುದರಿಂದ ಸಂಸದನಾಗಿಯೂ ಅತಿ ಹೆಚ್ಚು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.

ಶುಕ್ರವಾರ ಹಾವೇರಿ ಜಿಲ್ಲೆಯ ಡಿಸಿ ಕಚೇರಿಯಲ್ಲಿ ಕೇಂದ್ರದ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಲಿದ್ದೇನೆ. ಕೇಂದ್ರದ ಯೋಜನೆಗಳನ್ನು ಚುರುಕುಗೊಳಿಸುವೆ ಎಂದು ಹೇಳಿದರು.

ಜೂನ್ 17ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ. ಬಳಿಕ ಶಿಗ್ಗಾವಿ ಉಪಚುನಾವಣೆ ಪ್ರಕ್ರಿಯೆ ಶುರುವಾಗಲಿದೆ. ಸಮೀಕ್ಷೆ ನಡೆಸಿ ಜನಾಭಿಪ್ರಾಯ ಯಾರ ಪರ ಇದೆಯೋ ಅವರಿಗೆ ಪಕ್ಷ ಟಿಕೆಟ್ ನೀಡಲಿದೆ.

ನಮ್ಮಲ್ಲೂ ಅನೇಕ ಸಮರ್ಥ ಅಭ್ಯರ್ಥಿಗಳಿದ್ದಾರೆ. ಖಂಡಿತವಾಗಿ ಶಿಗ್ಗಾವಿ ಉಪಚುನಾವಣೆಯಲ್ಲಿ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು 15 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ, ಒಂದೇ ವರ್ಷದಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಫಲಾನುಭವಿಗಳಿಗೆ ಸರಿಯಾಗಿ ಯೋಜನೆಗಳು ತಲುಪುತ್ತಿಲ್ಲ. ಫಲಾನುಭವಿಗಳಾಗದವರಿಗೆ ಯಾವುದೇ ಪ್ರಯೋಜನ ಆಗಿಲ್ಲ.

ಎರಡೂ ವರ್ಗದವರು ಶೀಘ್ರವೇ ಸರ್ಕಾರದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದು ಭವಿಷ್ಯ ನುಡಿದರು.

ಶಿಗ್ಗಾವಿಯಲ್ಲಿ ನಡೆಯುತ್ತಿರುವ ಎನ್‌ಕೆಎಸ್‌ಆರ್‌ಟಿಸಿ ಡಿಪೊ ಹಾಗೂ ತರಬೇತಿ ಕೇಂದ್ರ, ಮೆಟ್ರಿಕ್ ನಂತರದ ಬಾಲಕಿಯರ ಸರ್ಕಾರಿ ವಸತಿ ನಿಲಯ, ವಕೀಲರ ಸಂಘ, ಪ್ರವಾಸಿ ಮಂದಿರ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಈ ಸರ್ಕಾರದಲ್ಲಿ ಹಣ ಇಲ್ಲದ ಕಾರಣ ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಸ್ಥಗಿತವಾಗಿದೆ ಎಂದು ಆರೋಪಿಸಿದರು.

ಕೃಷಿ ಇಲಾಖೆ ರೈತ ವಿರೋಧಿಯಾಗಿದೆ

ಈ ಬಾರಿ ಮಳೆ ಚೆನ್ನಾಗಿ ಆಗಿದೆ. ಕಾಂಗ್ರೆಸ್ ಬಂದಾಗ ಬರಗಾಲ ಶುರುವಾಗಿತ್ತು. ಮೋದಿಯವರ ಸರ್ಕಾರ ಬಂದ ಕೂಡಲೇ ಮಳೆ ಶುರುವಾಗಿದೆ. ರಾಜ್ಯ ಸರ್ಕಾರ ರೈತರಿಗೆ ಬೀಜ, ಗೊಬ್ಬರ ವ್ಯವಸ್ಥೆ ಮಾಡಿಲ್ಲ. ರೈತರಿಗೆ ಅಗತ್ಯವಿರುವ ಗೊಬ್ಬರ ಬಿಟ್ಟು ತಮ್ಮ ಹತ್ತಿರ ಇರುವ ಗೊಬ್ಬರ ತೆಗೆದುಕೊಂಡು ಹೋಗುವಂತೆ ಹೇಳುತ್ತಿದ್ದಾರೆ. ಕೃಷಿ ಇಲಾಖೆ ರೈತರ ವಿರೋಧಿಯಾಗಿದೆ. ಸೊಸೈಟಿಗಳಲ್ಲಿ ಗೊಬ್ಬರ ಇಲ್ಲ. ವ್ಯಾಪಾರಸ್ಥರ ಬಳಿ ಗೊಬ್ಬರ ಇದೆ. ಹೀಗಾಗಿ ಹೆಚ್ಚಿನ ದರಕ್ಕೆ ಗೊಬ್ಬರ ಮಾರುತ್ತಿದ್ದಾರೆ. ಆದರೆ, ಅಧಿಕಾರಿಗಳು ಎಲ್ಲಿಯೂ ದಾಳಿ ಮಾಡಿಲ್ಲ. ಹಾವೇರಿ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮುಂಗಾರು ಹಂಗಾಮು ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು.


Spread the love

LEAVE A REPLY

Please enter your comment!
Please enter your name here