ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ತಾಲೂಕಿನ ಮಾಗಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮತ್ತು ಪ್ರಗತಿಯಲ್ಲಿರುವ ನರೇಗಾ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಪರಿಶೀಲಿಸಿದರು.
ನಂತರ ಆರ್‌ಡಿಪಿಆರ್ ಇಲಾಖೆ ವತಿಯಿಂದ ನಡೆಯುತ್ತಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ, ಪುಸ್ತಕಗಳ ಸಂಖ್ಯೆ ಮತ್ತು ಓದುಗರ ಸಂಖ್ಯೆಯನ್ನು ಪಡೆದುಕೊಂಡು ಓದುಗರಿಗೆ ಮುಕ್ತ ಅವಕಾಶವನ್ನು ಕಲ್ಪಿಸಿಕೊಡುವಂತೆ ಸಿಬ್ಬಂದಿಗಳಿಗೆ ಸೂಚನೆಯನ್ನು ನೀಡಿದರು. ಮಾಗಡಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೂ ತೆರಳಿ ಮಕ್ಕಳಿಗೆ ನೀಡುವಂತಹ ಪೌಷ್ಠಿಕ ಆಹಾರದ ಪರಿಶೀಲನೆ ನಡೆಸಿ ಮಕ್ಕಳಿಗೆ ಸರಕಾರ ಕೊಡಮಾಡುವ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದರು.
ತೆರಿಗೆ ವಸೂಲಿಯನ್ನು ಒತ್ತಾಯಪೂರ್ವಕವಾಗಿ ಮಾಡದೇ ಸ್ನೇಹಪೂರ್ವಕವಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ತೆರಿಗೆ ವಸೂಲಿಯನ್ನು ಹೆಚ್ಚಿಸಬೇಕೆಂದು ಸೂಚನೆಯನ್ನು ನೀಡಿದರು.
ಇತ್ತೀಚೆಗೆ ಶಿರಹಟ್ಟಿ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಧಾವಿಸಿ ಸಭೆಗಳನ್ನು ನಡೆಸುತ್ತಿದ್ದಾರೆ. ವಿವಿಧ ಸ್ಥಳಗಳಲ್ಲಿ ಕಾಮಗಾರಿಗಳ ವೀಕ್ಷಣೆಗೂ ಆಗಮಿಸುತ್ತಿದ್ದಾರೆ. ಆದರೆ, ಸ್ಥಳೀಯ ತಾಲೂಕಾ ಮಟ್ಟದ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸುವ ಬಗ್ಗೆ ಯಾವುದೇ ಮಾಹಿತಿ ನೀಡದೇ ಇರುವುದು ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೇ ಸ್ಥಳೀಯ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಸೂಕ್ತ ನಿರ್ದೆಶನ ನೀಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.