ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಅಣ್ಣಿಗೇರಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅ. 8ರ ಸಂಜೆಯಿಂದ ಮಧ್ಯರಾತ್ರಿಯವರೆಗೆ ಅಪಾರ ಪ್ರಮಾಣದ ಮಳೆ ಸುರಿದಿದ್ದು, ಅಣ್ಣಿಗೇರಿಯ ವಿವಿಧ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ, ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಪ್ರಭಾರ ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಭುವನೇಶ ಪಾಟೀಲ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಮಳೆ ಹಾನಿ ಪರಿಶೀಲಿಸಿದರು.
ಜಲಾವೃತವಾಗಿರುವ ಅಣ್ಣಿಗೇರಿಯ ಸುರಕೋಡ್ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿ, ಬಡಾವಣೆ ನಿವಾಸಿಗಳೊಂದಿಗೆ ಚರ್ಚಿಸಿದರು. ತಹಸೀಲ್ದಾರ ಹಾಗೂ ಪುರಸಭೆ ಅಧಿಕಾರಿಗಳಿಗೆ ಬಡಾವಣೆಯಲ್ಲಿ ನಿಂತಿರುವ ನೀರು ಸಂಪೂರ್ಣವಾಗಿ ಹರಿದು ಹೋಗುವಂತೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಲು ಮತ್ತು ಜಲಾವೃತ ಪ್ರದೇಶದ ಮನೆಗಳಲ್ಲಿನ ಸಾರ್ವಜನಿಕರಿಗೆ ಅಗತ್ಯ ನೆರವು ನೀಡಲು ಸೂಚಿಸಿದರು.
ರಸ್ತೆಯ ಪಕ್ಕದಲ್ಲಿ ಒಳಚರಂಡಿ ಕಿರಿದಾಗಿದ್ದು, ಹೂಳು ತುಂಬಿ ನೀರು ಹೊರಬರುತ್ತದೆ. ಅಣ್ಣಿಗೇರಿ ಪಟ್ಟಣದ ಸುತ್ತಲಿನ ಹಳ್ಳಿಗಳ ಜಮೀನುಗಳ ನೀರು ಪಟ್ಟಣಕ್ಕೆ ಬರುತ್ತದೆ. ಇದರಿಂದಾಗಿ ಹೆಚ್ಚು ಹಾನಿ ಆಗುತ್ತಿದೆ. ರಾಜ ಕಾಲುವೆಗೆ ಮಳೆ ನೀರು ಹರಿದು ಹೋಗಲು ಶಾಶ್ವತ ಪರಿಹಾರ ನೀಡಬೇಕು. ಅಲ್ಲದೇ ರಾಜ ಕಾಲುವೆಯನ್ನು ಅಗಲೀಕರಣ ಮಾಡಬೇಕೆಂದು ಪ್ರಭಾರ ಜಿಲ್ಲಾಧಿಕಾರಿಗಳಲ್ಲಿ ಸಾರ್ವಜನಿಕರು ಮನವಿ ಮಾಡಿದರು.
ಪಟ್ಟಣದ ಸುರಕೋಡ್ ಬಡಾವಣೆಯಂತೆ ರಾಜರಾಜೇಶ್ವರಿ ನಗರ, ಜೆ.ಎಸ್.ಎಸ್. ಕಾಲೋನಿಯಲ್ಲಿಯೂ ಮಳೆ ನೀರು ನಿಂತಿದ್ದು, ನಿಂತ ನೀರು ಹರಿದು ಹೋಗಲು ತಾತ್ಕಾಲಿಕವಾಗಿ ಕಾಲುವೆ ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ ಎಂ.ಜಿ. ದಾಸಪ್ಪನವರ ತಿಳಿಸಿದರು.