
ಭಾರತೀಯರ ಹಿಂದೂ ಪಂಚಾಂಗದ ಪ್ರಕಾರ ಪ್ರತಿ ವರ್ಷ ಭಾದ್ರಪದ ಮಾಸ ಶುಕ್ಲ ಪಕ್ಷದ ಚೌತಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುವುದು. ಈ ವರ್ಷ ಆಗಸ್ಟ್ 27ರಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಈ ಹಬ್ಬದಲ್ಲಿ ಬೆಳ್ಳಿ ಗಣೇಶ ಅಥವಾ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಯನ್ನು ಇಟ್ಟು, ಹಬ್ಬವನ್ನು ಆಚರಿಸಲಾಗುತ್ತದೆ. ಗಣೇಶನು ತಿಂಡಿ ಪ್ರಿಯ, ಹಾಗಾಗಿ ಅವನಿಗೆ ಇಷ್ಟವಾಗುವ ಮೋದಕ, ಕಡಬು, ಚಕ್ಕಲಿ, ಕೋಡುಬಳೆ ಸೇರಿದಂತೆ ವಿವಿಧ ಬಗೆಯ ತಿಂಡಿಗಳನ್ನು ಮಾಡಿ, ನೈವೈದ್ಯಕ್ಕೆ ಇಡುತ್ತಾರೆ.
ಗಣೇಶನ ಮೂರ್ತಿಯನ್ನು ಕೇವಲ ಮನೆಯಲ್ಲಿ ಮಾತ್ರವಲ್ಲ, ಶಾಲಾ-ಕಾಲೇಜು, ಕಚೇರಿಗಳಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲೂ ವಿವಿಧ ಗಾತ್ರದ ಗಣೇಶನನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ಮಹಾರಾಷ್ಟ್ರದಲ್ಲಿ ಸ್ವಾತಂತ್ರ‍್ಯ ಸಂಗ್ರಾಮದ ಸಮಯದಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.
ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ. ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ. ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸಿದರು. ಹೀಗಾಗಿ ಗಣಪ ಗಜಮುಖನಾದ.
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬಣ್ಣದಿಂದ ತಯಾರಿಸಿರುವ ಗೌರಿ ಹಾಗು ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ ಕೆರೆ, ಬಾವಿ ಹಾಗೂ ಇತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದರಿಂದ ನೀರು ಕಲುಷಿತವಾಗಿ, ಜಲಚರಗಳಿಗೆ ಹಾನಿಯುಂಟಾಗುತ್ತದೆ. ಇದನ್ನು ತಪ್ಪಿಸಲು ಜೇಡಿ ಮಣ್ಣಿನಿಂದ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಗೌರಿ-ಗಣೇಶ ಚರ್ತುರ್ಥಿ ಆಚರಣೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಪರಿಸರ ಪ್ರೇಮಿಗಳು ಸಾರ್ವಜನಿಕರಲ್ಲಿ ಮನವಿ ಮಾಡುತ್ತಾರೆ.
ಪಿಓಪಿ ಅಥವಾ ಬಣ್ಣವನ್ನು ಬಳಸಿದ ಮೂರ್ತಿಗಳನ್ನು ನೇರವಾಗಿ ಹೊಂಡ, ನದಿಗಳಿಗೆ ಬಿಡದೆ ಬಕೆಟ್‌ನಲ್ಲಿ ವಿಸರ್ಜಿಸಬೇಕು ಅಥವಾ ಮೂರ್ತಿಗಳನ್ನು ವಿಸರ್ಜಿಸಲು ಕಲ್ಯಾಣಿಗಳು ತಾತ್ಕಾಲಿಕ ಹೊಂಡಗಳನ್ನು ನಿರ್ಮಿಸಿ ಅದರಲ್ಲಿ ಮೂರ್ತಿಗಳನ್ನು ವಿಸರ್ಜಿಸುವುದು. ಸೂಚಿತ ಕೆರೆಗಳಲ್ಲಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಎಲ್ಲವನ್ನೂ ತೆಗೆದು ನಂತರ ಮೂರ್ತಿಯನ್ನು ವಿಸರ್ಜನೆ ಮಾಡಬೇಕು.
ಬಾವಿ, ಕೆರೆ ಹಾಗೂ ಹೊಳೆಗಳಲ್ಲಿ ಗಣಪತಿ ವಿಗ್ರಹಗಳನ್ನು ವಿಸರ್ಜನೆ ಮಾಡುವುದರಿಂದ ಅಂತರ್ಜಲ, ಕುಡಿಯುವ ನೀರಿನ ಸೆಲೆಗಳು ಕಲುಷಿತವಾಗಿ ಪರಿಸರಕ್ಕೆ ಹಾನಿಯಾಗುತ್ತದೆ. ಈ ಎಲ್ಲಾ ತಪ್ಪುಗಳಿಂದ ಪರಿಸರ ಮಾಲಿನ್ಯ ಉಂಟಾಗುವುದು ಸಹಜ. ಹೀಗಾಗಿ ನಾವು ಎಚ್ಚೆತ್ತುಕೊಂಡು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು.
ಒಟ್ಟಾರೆಯಾಗಿ ನಮ್ಮ ಸಂತೋಷದ ಸಲುವಾಗಿ ಗಣೇಶ ಹಬ್ಬದ ಆಚರಣೆ ನಮಗೆ ನೋವನ್ನು ತರಬಾರದು. ಹಾಗಾಗಿ ನಾವು ಒಂದಿಷ್ಟು ಒಳ್ಳೆಯ ಕೆಲಸ ಹಾಗೂ ಪ್ರತಿಜ್ಞೆಯ ಮೂಲಕ ಹಬ್ಬದ ಆಚರಣೆ ಮಾಡುವುದು ಸೂಕ್ತ. ಅದರಿಂದ ಆರೋಗ್ಯಕರ ಹಬ್ಬದ ಆಚರಣೆ ನಮ್ಮದಾಗುವುದು. ಗಣೇಶ ಹಬ್ಬದಲ್ಲಿ ರಸ್ತೆ ಬದಿಯಲ್ಲಿ ಹಾಗೂ ಚರಂಡಿಯಲ್ಲಿ ಕಸಗಳನ್ನು ಎಸೆಯದೇ ಕಸದ ಡಬ್ಬಿಗಳಿಗೆ ಹಾಕುವಂತೆ ಜಾಗೃತಿ ಅರಿವು ಮೂಡಿಸುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಬೇಕು. ಏನಂತೀರಿ..?
– ಬಸವರಾಜ ಎಮ್.ಯರಗುಪ್ಪಿ.
ಶಿಕ್ಷಕರು, ಹವ್ಯಾಸಿ ಬರಹಗಾರರು.
ಲಕ್ಷ್ಮೇಶ್ವರ.