ಬೆಂಗಳೂರು:- ರಾಜ್ಯ ಸರ್ಕಾರ ಮೊದಲು ಬಾಣಂತಿಯರಿಗೆ ಬದುಕುವ ಗ್ಯಾರಂಟಿ ಕೊಡಲಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಬಾಣಂತಿಯರ ಸರಣಿ ಸಾವು ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. 2,000 ರೂ. ನೀಡುವ ಬದಲು ಮಹಿಳೆಯರ ಜೀವ ಉಳಿಸಿದರೆ ಸಾಕಿತ್ತು. ಬಾಣಂತಿಯರಿಗೆ ಬದುಕುವ ಗ್ಯಾರಂಟಿಯನ್ನು ಮೊದಲು ನೀಡಬೇಕು. ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಬಾಣಂತಿಯರ ಮರಣ ಮೃದಂಗ ಇನ್ನೂ ನಿಂತಿಲ್ಲ. ಒಟ್ಟು 736 ತಾಯಂದಿರು ಮೃತಪಟ್ಟಿದ್ದಾರೆ. ಇದು ಸರ್ಕಾರದ ಪ್ರಾಯೋಜಿತ ಕೊಲೆಯಾಗಿದ್ದು, ಸರ್ಕಾರವೇ ನೇರ ಹೊಣೆಯಾಗಿದೆ. ಹುಬ್ಬಳ್ಳಿಯಲ್ಲಿ ಬಾಣಂತಿ ಸತ್ತಿದ್ದಕ್ಕೆ ಅವರ ಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಿಪಟೂರಿನಲ್ಲೂ ಒಬ್ಬ ಬಾಣಂತಿ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಪೂರೈಸಿದ ಐವಿ ದ್ರಾವಣದಿಂದಾಗಿ ಬಾಣಂತಿಯರು ಮೃತರಾಗುತ್ತಿದ್ದಾರೆ. ಕಾಂಗ್ರೆಸ್‌ನ ಸಮಾವೇಶ ನಡೆದಾಗಲೇ ಬಾಣಂತಿಯರು ಮೃತಪಟ್ಟಿದ್ದರೂ ಅಲ್ಲಿಗೆ ಹಿರಿಯ ನಾಯಕರು ಭೇಟಿ ನೀಡಿಲ್ಲ ಎಂದು ದೂರಿದರು.
ಸರ್ಕಾರ ಎಲ್ಲವನ್ನೂ ಸರಿಯಾಗಿ ಮಾಡಿದೆ ಎಂದು ಸ್ಪಷ್ಟನೆ ನೀಡಿದೆ. ಆದರೆ ಔಷಧಿ ಕಂಪನಿ ಪೂರೈಸಿದ ಔಷಧದ ವಿಚಾರದಲ್ಲಿ ಡ್ರಗ್ ಕಂಟ್ರೋಲರ್ ಮಾಡಿದ ತಪ್ಪುಗಳ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ನೋಟಿಸ್ ನೀಡಿದ್ದಾರೆ. ಆದರೆ ಅಧಿವೇಶನದಲ್ಲಿ ಮಾತ್ರ ಸಚಿವ ದಿನೇಶ್ ಗುಂಡೂರಾವ್ ಎಲ್ಲ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ ಎಂದು ಕಿಡಿಕಾರಿದರು.