ಜನರಲ್ಲಿ ಸರಕಾರದ ಬಗ್ಗೆ ವಿಶ್ವಾಸ ಮೂಡಿಸಿ: ಡಾ. ರಾಮ್ ಪ್ರಸಾತ್ ಮನೋಹರ್ ವಿ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಸರಕಾರಗಳು ಜನರ ಕಲ್ಯಾಣಕ್ಕಾಗಿ, ರಾಜ್ಯದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ, ಸೌಲಭ್ಯಗಳನ್ನು ನೀಡುತ್ತವೆ. ಇವುಗಳನ್ನು ಅರ್ಹ ಫಲಾನುಭವಿ ಜನರಿಗೆ ಸಕಾಲದಲ್ಲಿ ತಲುಪಿಸುವ ಮೂಲಕ ಸಾರ್ವಜನಿಕರಲ್ಲಿ ಸರಕಾರದ ಬಗ್ಗೆ ವಿಶ್ವಾಸ, ಸದಾಭಿಪ್ರಾಯ ಮೂಡಿಸುವುದು ಎಲ್ಲ ಸರಕಾರಿ ನೌಕರರ ಆದ್ಯ ಕರ್ತವ್ಯವಾಗಿದೆ ಎಂದು ಜಿ.ಪಂ ಆಡಳಿತಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ರಾಮ್ ಪ್ರಸಾತ್ ಮನೋಹರ್ ವಿ ಹೇಳಿದರು.

Advertisement

ಅವರು ಸೋಮವಾರ ಜಿ.ಪಂ ಸಭಾಂಗಣದಲ್ಲಿ 2025-26ನೇ ಸಾಲಿನ ಸೆಪ್ಟೆಂಬರ್ 2025ರ ಅಂತ್ಯಕ್ಕೆ ಕೊನೆಗೊಂಡಂತೆ ಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮ, ಹೋಬಳಿ, ತಾಲೂಕು ಹಂತದ ಕ್ಷೇತ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಅಲ್ಲಿನ ಸಾರ್ವಜನಿಕರೊಂದಿಗೆ ನೇರವಾಗಿ, ನಿರಂತರ ಸಂಪರ್ಕದಲ್ಲಿರಬೇಕು. ಗ್ರಾಮ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಿ, ಸರಕಾರದ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳ್ಳುವ ಯೋಜನೆ, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಜನರಲ್ಲಿ ಜಾಗೃತಿ ಮೂಡಿಸಬೇಕು. ಇದು ಸರಕಾರದ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಸದಾಭಿಪ್ರಾಯ ಮೂಡಲು ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನ ಕಾಮಗಾರಿ, ಯೋಜನೆಗಳು ಕಾಲಮಿತಿಯಲ್ಲಿ ಅನುಷ್ಠಾನವಾಗಬೇಕು. ಬಿಡುಗಡೆ ಆದ ಅನುದಾನ ಲ್ಯಾಪ್ಸ್ ಆದರೆ ಸಂಬಂಧಿಸಿದ ಅಧಿಕಾರಿಯನ್ನು ಹೊಣೆ ಮಾಡಲಾಗುತ್ತದೆ. ಕಾಮಗಾರಿ ಅನುಷ್ಠಾನದಲ್ಲಿ ಸರಕಾರಿ ನಿಯಮಗಳ ಉಲ್ಲಂಘನೆ ಆಗಬಾರದು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿದ್ದು, ಸಮರ್ಪಕವಾಗಿ ಜಾರಿ ಆಗಬೇಕು. ಹಿರಿಯ ಅಧಿಕಾರಿಗಳ ತಂಡ ತಾಲೂಕುವಾರು, ಘಟಕವಾರು ಕಾಮಗಾರಿ, ಕಾರ್ಯಕ್ರಮಗಳನ್ನು ಪರಿಶೀಲಿಸಿ, ನಿಯಮ ಪಾಲನೆ ಆಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಈ ಕುರಿತು ಪ್ರತಿ ತಿಂಗಳು ತಮ್ಮ ಕಚೇರಿಗೆ ವರದಿ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ತಾಯಂದಿರ ಮರಣ ಪ್ರಮಾಣ ಹೆಚ್ಚಿದ್ದು, ಅದರ ಬಗ್ಗೆ ಪರಿಶೀಲಿಸಬೇಕು. ಮರಣ ಪ್ರಮಾಣ ಕಡಿಮೆ ಆಗುವಂತೆ ಆರೋಗ್ಯ ಇಲಾಖೆ ಮುನ್ನಚ್ಚರಿಕೆ ವಹಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲೆಯಲ್ಲಿ ಇನ್ನಷ್ಟು ತೃಪ್ತಿಕರವಾಗಿ ಕೆಲಸ ಮಾಡಬೇಕು. ಮಕ್ಕಳ ಆಹಾರ ಮಧ್ಯವರ್ತಿಗಳ ಪಾಲು, ಬೇರೆಯವರ ಪಾಲು ಆಗಬಾರದು. ಮುಂದಿನ ದಿನಗಳಲ್ಲಿ ಇಂತಹ ಲೋಪಗಳು ಕಂಡಬಂದರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿದರು. ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ ವೇದಿಕೆಯಲ್ಲಿದ್ದರು. ಜಿ.ಪಂ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸ್ವಾಗತಿಸಿ, ನಿರ್ವಹಿಸಿದರು. ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ವಂದಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಬೆಳೆಹಾನಿ ಸಮೀಕ್ಷೆಯನ್ನು ಪೂರ್ಣಗೊಳಿಸಿ, ಅರ್ಹ ರೈತರ ಹೆಸರುಗಳನ್ನು ಪರಿಹಾರ ಪೋರ್ಟಲ್‌ನಲ್ಲಿ ಈಗಾಗಲೇ ಎಂಟ್ರಿ ಮಾಡಲಾಗಿದೆ. ಅಂದಾಜು 97 ಸಾವಿರ ಹೆಕ್ಟೆರ್ ಪ್ರದೇಶದ ಬೆಳೆಹಾನಿಗೆ ಅಂದಾಜು ರೂ. 85 ಕೋಟಿ ಮೊತ್ತದ ಪರಿಹಾರ ಅಗತ್ಯವಿದೆ. ಈಗಾಗಲೇ ರೂ. 22 ಕೋಟಿ ಪರಿಹಾರ ಹಣ ಬಿಡುಗಡೆ ಆಗಿದ್ದು, ರೈತರ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಜಮೆ ಮಾಡಲಾಗುತ್ತಿದೆ ಎಂದರು.


Spread the love

LEAVE A REPLY

Please enter your comment!
Please enter your name here