ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ಎಂದರೆ ಅಂಕಗಳನ್ನು ಹೆಚ್ಚಿಸುವ ಮಾತಲ್ಲ. ಅದು ಅವರ ಜೀವನದ ದೃಷ್ಟಿಕೋನವನ್ನು ಬದಲಿಸುವ ದೊಡ್ಡ ಹೊಣೆ. ಶಿಕ್ಷಕರು ಕಲಿಕೆಗೆ ಸ್ಪೂರ್ತಿ ನೀಡಿದಾಗ ಮಾತ್ರ ನಿಜವಾದ ಫಲಿತಾಂಶ ರೂಪುಗೊಳ್ಳುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ.ಶೆಟ್ಟೆಪ್ಪನವರ ಅಭಿಪ್ರಾಯಪಟ್ಟರು.
ನಗರ ವಲಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಶನಿವಾರ ಮಹಾವೀರ ಜೈನ್ ಪ್ರೌಢಶಾಲೆಯಲ್ಲಿ ನಡೆದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ಬದಲಾಗಿರುವ ತಂತ್ರಜ್ಞಾನ ಯುಗದಲ್ಲಿ ಕಲಿಯುತ್ತಿದ್ದಾರೆ. ಪುಸ್ತಕದ ಗಡಿಯಲ್ಲಿರುವ ಕಲಿಕೆ ಅವರಿಗೆ ಸಾಕಾಗುವುದಿಲ್ಲ. ತರಗತಿಯಲ್ಲಿ ಕುತೂಹಲ ಹುಟ್ಟಿಸಿ, ಪ್ರಶ್ನೆ ಕೇಳುವ ಚಟುವಟಿಕೆಯನ್ನು ಉತ್ತೇಜಿಸಿದರೆ ಅವರು ಕಲಿಕೆಯನ್ನು ಪ್ರೀತಿಸಲು ಆರಂಭಿಸುತ್ತಾರೆ. ಕಲಿಕೆ ಪ್ರೀತಿಯಾದಾಗಲೇ ಫಲಿತಾಂಶವೂ ಸುಧಾರಿಸುತ್ತದೆ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಪ್ರತಿದಿನ 30 ನಿಮಿಷದ ವೈಯಕ್ತಿಕ ಅಭ್ಯಾಸ ವಿದ್ಯಾರ್ಥಿಯ ಕಲಿಕೆಯ ದಿಕ್ಕು ಬದಲಿಸುತ್ತದೆ. ವಿಷಯ ಅರ್ಥವಾಗದ ಮಕ್ಕಳಿಗೆ ಶಿಕ್ಷಕರು ಮನೆಮಂದಿಯಂತೆ ಧೈರ್ಯ ತುಂಬಬೇಕು. ವಿದ್ಯಾರ್ಥಿ ತಪ್ಪು ಮಾಡಿದಾಗ ಗದರಿಸುವ ಬದಲು, ಅವರನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ತೋರಿಸಿದರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಅಂಕಗಳ ಒತ್ತಡಕ್ಕಿಂತ ಕಲಿಕೆಯ ಸಂತೋಷವನ್ನು ಮಕ್ಕಳಲ್ಲಿ ಮೂಡಿಸುವುದು ನಿಜವಾದ ಶಿಕ್ಷಣ. ಈ ವರ್ಷ ಗದಗ ವಲಯದಿಂದ ಅತ್ಯುತ್ತಮ ಫಲಿತಾಂಶ ಬರಬೇಕೆಂಬ ಗುರಿ ಶಿಕ್ಷಕರ ಹೃದಯದಲ್ಲೇ ಹುಟ್ಟಬೇಕು. ಶಿಕ್ಷಕರ ಬದ್ಧತೆ ವಿದ್ಯಾರ್ಥಿಗಳ ಯಶಸ್ಸಿನ ಮೂಲ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ, ಶಿಕ್ಷಣ ಸಂಯೋಜಕ ಮುರಳಿ ಸೋಲಾಪುರ ಮತ್ತು ವಿಷಯ ಸಂಪನ್ಮೂಲ ವ್ಯಕ್ತಿಗಳು ತಮ್ಮ ಅನುಭವ ಹಂಚಿದರು. ಹೊಸ ಕಲಿಕೆ ತಂತ್ರಗಳು, ಪುನರಾವರ್ತನೆ ವಿಧಾನಗಳು, ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಮತ್ತು ವಿದ್ಯಾರ್ಥಿ-ಕೇಂದ್ರೀಕೃತ ಅಧ್ಯಯನ ಮಾರ್ಗಗಳನ್ನು ಶಿಕ್ಷಕರಿಗೆ ಪರಿಚಯಿಸಲಾಯಿತು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ಯಾಮ ಲಾಂಡೆ, ಎಂ.ಎ. ಯರಗುಡಿ, ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್. ಬಡಿಗೇರ, ಸಂಪನ್ಮೂಲ ವ್ಯಕ್ತಿಗಳಾದ ಸೆಲ್ವ, ಕೆ.ವಿ. ಕೋರಡ್ಡಿ, ಸಿ.ಎಸ್. ಮಾನ್ವಿ, ಬಸವರಾಜ ಕುಂಬಾರ, ಮಹಾಂತೇಶ ವಡವಿ, ನೂರಅಹಮದ್ ನದಾಫ್, ಮಾಲಾ ರಾಮನ್ನವರ, ಶರಣು ಗೌರಿ ಉಪಸ್ಥಿತರಿದ್ದರು. ಎಲ್ಲ ವಿಷಯಗಳ ವಿಷಯ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗಿಯಾಗಿ ಸದುಪಯೋಗ ಪಡೆದುಕೊಂಡರು.
ಬಾಕ್ಸ್
ಪುನಶ್ಚೇತನ ಕಾರ್ಯಾಗಾರದಲ್ಲಿ ಪಾಲ್ಗೊಂಡ ಶಿಕ್ಷಕರು ಶೆಟ್ಟೆಪ್ಪನವರ ಸಂದೇಶದಿಂದ ಪ್ರೇರಿತರಾಗಿ, ಈ ಬಾರಿ ವಿದ್ಯಾರ್ಥಿಗಳಿಗೆ ಇನ್ನಷ್ಟು ಪರಿಣಾಮಕಾರಿ ಬೋಧನೆ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು. ಗದಗ ವಲಯವು ಬದ್ಧತೆಯೊಂದಿಗೆ ಮುಂದಿನ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಿರೀಕ್ಷೆ ಹೆಚ್ಚಾಗಿದೆ.



