ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಸೂಚನೆ

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರ ಅಧ್ಯಕ್ಷತೆಯಲ್ಲಿ ವಿಧಾನ ಸೌಧದಲ್ಲಿ ಶನಿವಾರ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಸಮ್ಮುಖದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಸಚಿವ ಡಾ. ಎಂ.ಸಿ. ಸುಧಾಕರ್ ಅವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.

Advertisement

ಸಹಾಯಕ ಪ್ರಾಧ್ಯಾಪಕರಿಗೆ ಹಾಗೂ ಸಹ ಪ್ರಾಧ್ಯಾಪಕರನ್ನು ಪದೋನ್ನತಿ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿದ ಬಸವರಾಜ ಹೊರಟ್ಟಿ, ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆದು 11 ತಿಂಗಳ ಬಳಿಕ ಸಂದರ್ಶನ ನಡೆಸಿದ್ದರೂ, ಇದುವರೆಗೂ ಮುಂಬಡ್ತಿ ನೀಡಿಲ್ಲ. ಕೂಡಲೇ ಒಂದು ವಾರದೊಳಗಾಗಿ ಸಹಾಯಕ ಹಾಗೂ ಸಹ ಪ್ರಾಧ್ಯಾಪಕರಿಗೆ ಮುಂಬಡ್ತಿ ನೀಡಿ ಪಟ್ಟಿ ಬಿಡುಗಡೆಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

2023 ಡಿಸೆಂಬರ್ 23ರವರೆಗೆ ಆರ್.ಸಿ ಮತ್ತು ಓ.ಸಿ ಕೋರ್ಸ್ ಕಡ್ಡಾಯವಲ್ಲ ಎಂದು ವಿಶ್ವವಿದ್ಯಾಲಯದ ಧನ ಸಹಾಯ ಆಯೋಗ (ಯು.ಜಿ.ಸಿ) ವಿನಾಯಿತಿ ನೀಡಿದ್ದರೂ ಹಲವು ಅಧ್ಯಾಪಕರಿಗೆ ಮುಂಬಡ್ತಿ ನೀಡದೇ ಇರುವ ಬಗ್ಗೆ ಸಭೆಯಲ್ಲಿ ಹಲವು ಸದಸ್ಯರು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಇದು ಗಂಭೀರ ವಿಷಯವಾಗಿದ್ದು, ಈ ಬಗ್ಗೆ ಕೂಡಲೇ ಇಲಾಖೆ ಪ್ರಧಾನ ಕಾರ್ಯದರ್ಶಿ ಅಗತ್ಯ ಕ್ರಮ ವಹಿಸಬೇಕು ಎಂದರು.
ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ-ಬೋಧಕೇತರ ಹುದ್ದೆಗಳ ಭರ್ತಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿ ಹಾಗೂ ವೇತನ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಕಾಲಮಿತಿಯಲ್ಲಿ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ ಬಸವರಾಜ ಹೊರಟ್ಟಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನೌಕರರು ಮತ್ತು ಸಿಬ್ಬಂದಿಗಳಿಗೆ ವಿಶ್ರಾಂತಿ ವೇತನಕ್ಕೆ ಪೂರ್ಣ ಪ್ರಮಾಣದ ಪಿಂಚಣಿ ಅನುದಾನವನ್ನು ಆದ್ಯತೆ ಮೇರೆಗೆ ಒದಗಿಸುವಂತೆ ಉನ್ನತ ಶಿಕ್ಷಣ ಸಚಿವರನ್ನು ಕೋರಿದರು.

ಶಿಕ್ಷಕ, ಪದವೀಧರ ಕ್ಷೇತ್ರದ ಶಾಸಕರು, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು ಹಾಗೂ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತಾಲಯದಲ್ಲಿಯ ಸಿಬ್ಬಂದಿಗಳ ವರ್ತನೆ, ಭ್ರಷ್ಟಾಚಾರಗಳ ಆರೋಪಗಳ ಬಗ್ಗೆ ಹಲವು ಸದಸ್ಯರ ಪ್ರಸ್ತಾಪದ ಹಿನ್ನೆಲೆ ಈ ಕುರಿತಂತೆ ಕೂಡಲೇ ಆಂತರಿಕ ತನಿಖೆ ನಡೆಸಬೇಕು. ಆರೋಪ ಇರುವ ಸಿಬ್ಬಂದಿಗಳನ್ನು ತಕ್ಷಣವೇ ಎತ್ತಂಗಡಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.


Spread the love

LEAVE A REPLY

Please enter your comment!
Please enter your name here