ವಿಜಯಸಾಕ್ಷಿ ಸುದ್ದಿ, ಧಾರವಾಡ: ಶಾಲಾ ಕಟ್ಟಡ ಸೋರಿಕೆ ಕುರಿತು ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ನಗರದ ಸರಸ್ವತಪುರದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ನಂ.9ಕ್ಕೆ ಮಂಗಳವಾರ ಸಂಜೆ ಜಿಲ್ಲಾಧಿಕಾರಿ ದಿವ್ಯ ಪ್ರಭು ದಿಢೀರ್ ಭೇಟಿ ನೀಡಿ, ಶಿಕ್ಷಕರ ಮತ್ತು ಮಕ್ಕಳ ಹಾಜರಾತಿ, ಶಾಲೆ ಕಟ್ಟಡ ಪರಿಶೀಲಿಸಿದರು.
ಪ್ರತಿ ತರಗತಿಗೆ ಹೋಗಿ, ವಿದ್ಯಾರ್ಥಿಗಳಿಗೆ ಸರಕಾರದಿಂದ ಉಚಿತವಾಗಿ ವಿತರಿಸಿರುವ ಸಮವಸ್ತ್ರ, ಪಠ್ಯಪುಸ್ತಕಗಳ ಬಗ್ಗೆ ವಿದ್ಯಾರ್ಥಿಗಳಿಂದ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದುಕೊಂಡರು. ಕೆಲವು ವಿದ್ಯಾರ್ಥಿಗಳು ಸಮವಸ್ತ್ರ ಧರಿಸದಿರುವುದನ್ನು ಗಮನಿಸಿ, ನಾಳೆ ಬೆಳಿಗ್ಗೆ ಎಲ್ಲರಿಗೂ ಎರಡೂ ಜೊತೆ ಸಮವಸ್ತ್ರ ವಿತರಿಸಿ, ಖುದ್ದು ತಮ್ಮ ಕಚೇರಿಗೆ ಶಾಲಾ ಮುಖ್ಯಸ್ಥರು ಶಾಲಾ ಅವಧಿ ನಂತರ ಆಗಮಿಸಿ ಮಾಹಿತಿ ಸಲ್ಲಿಸಲು ಅವರು ಸೂಚಿಸಿದರು.
ಶಾಲೆಯಲ್ಲಿ ಸಮಯಕ್ಕೆ ಸರಿಯಾಗಿ ಶಿಕ್ಷಕರು ಹಾಜರಿದ್ದು, ಮಕ್ಕಳ ಹಾಜರಾತಿ ಖಚಿತಪಡಿಸಿಕೊಳ್ಳಬೇಕು. ಈ ಶಾಲೆಗೆ ಕೊಳಚೆ ಪ್ರದೇಶದ, ಹಿಂದುಳಿದ ಪ್ರದೇಶದ ಮಕ್ಕಳು ಹೆಚ್ಚು ದಾಖಲಾಗುವದರಿಂದ ಮಕ್ಕಳಿಗೆ ಉತ್ತಮ ಓದು, ಬರಹ ಕಲಿಸಬೇಕು. ಪ್ರತಿ ಕೋಣೆಯಲ್ಲಿ ಉತ್ತಮ ಗಾಳಿ, ಬೆಳಕು ಬರುವಂತೆ ನೋಡಿಕೊಳ್ಳಬೇಕು. ಶಾಲೆಯಲ್ಲಿ ಹಾಗೂ ಶಾಲೆಯ ಆವರಣದಲ್ಲಿ ಶಿಸ್ತು, ಸ್ವಚ್ಛತೆ ಕಾಪಾಡಬೇಕು ಎಂದರು.
ಸರಸ್ವತಪುರ ಶಾಲೆಯಲ್ಲಿ ಈಗ 139 ವಿದ್ಯಾರ್ಥಿಗಳ ದಾಖಲಾತಿ ಇದೆ. ಹಿಂದಿನ ದಾಖಲಾತಿಗಳನ್ನು ಪರಿಶೀಲಿಸಿದಾಗ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆ ಆಗಿದೆ. ಏಳು ಜನ ಪೂರ್ಣಾವಧಿ ಶಿಕ್ಷಕರಿದ್ದಾರೆ. ಐದು ಕೋಣೆಗಳಿವೆ. ಹೆಚ್ಚುವರಿ ಕೋಣೆಗಳ ಸೌಲಭ್ಯ ಮಾಡಲಾಗುತ್ತಿದೆ. ಶಿಕ್ಷಕರು ಹೆಚ್ಚು ಕಾಳಜಿ ವಹಿಸಿ, ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಹಲಕುರ್ಕಿ ಸೇರಿದಂತೆ ಶಿಕ್ಷಕರು ಇದ್ದರು.