ಪೇಜಾವರ ಶ್ರೀಗಳಿಂದ ಸಂವಿಧಾನಕ್ಕೆ ಅಪಮಾನ: ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಸಾಹಿತಿ ಬಸವರಾಜ ಸೂಳಿಭಾವಿ ಆಗ್ರಹ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಂವಿಧಾನದಿಮದ ಭಾರತಕ್ಕೆ ವಿಶೇಷ ಗೌರವ ಲಭಿಸಿದೆ. ಡಾ. ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನ ಪ್ರಜಾಪ್ರಭುತ್ವದ ಹಿರಿಮೆಯನ್ನು ಸಾರಿದೆ. ಸಂವಿಧಾನ ದೇಶದಲ್ಲಿರುವ ಎಲ್ಲರನ್ನೂ ಗೌರವಿಸುತ್ತಿದ್ದು, ಎಲ್ಲ ಧರ್ಮ, ಧಾರ್ಮಿಕ ಭಾವನೆಗಳನ್ನು ಗೌರವಿಸುವ ಕೆಲಸವನ್ನು ಸಂವಿಧಾನ ಮಾಡಿದೆ. ಆದರೆ, ಪೇಜಾವರ ಶ್ರೀಗಳು ಸಂವಿಧಾನಕ್ಕೆ ಅಪಮಾನ ಮಾಡಿದ್ದು, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆಗ್ರಹಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆರ್‌ಎಸ್‌ಎಸ್ ದ್ವಿಮುಖ ನೀತಿ ಅನುಸರಿಸುತ್ತಿದೆ. ಬಿಜೆಪಿಯಲ್ಲಿರುವ ಮಂತ್ರಿಗಳು ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಈಗ ತನ್ನ ಅಂಗ ಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ ಸಮಾವೇಶ ನಡೆಸಿ ಶ್ರೀಗಳ ಮೂಲಕ ಸಂವಿಧಾನ ವಿರೋಧಿ ಹೇಳಿಕೆ ಹೇಳಿಸಲಾಗುತ್ತಿದೆ. ಸಂತರ ಸಮಾವೇಶದಲ್ಲಿ ಸಂವಿಧಾನ ಬದಲಿಸುವ ಹೇಳಿಕೆ ಆತಂಕಕಾರಿಯಾದ ಬೇಳವಣಿಕೆಯಾಗಿದೆ. ಬಿಜೆಪಿಯ ಮುಖಂಡರು ಸಂವಿಧಾನವೇ ಉಸಿರು ಎಂದು ಹೇಳುತ್ತಿದ್ದರೆ, ಇತ್ತ ಪೇಜಾವರ ಶ್ರೀಗಳು ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಆರ್‌ಎಸ್‌ಎಸ್‌ನ ದ್ವಿಮುಖ ನೀತಿ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಪೇಜಾವರ ಶ್ರೀಗಳು ದೇಶದ ಜನರಿಗೆ ಗೌರವ ನೀಡುವುದನ್ನು ಕಲಿಯಬೇಕು. ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲು ಭಾರತ ಹಿಂದೂ ರಾಷ್ಟ್ರವಾಗಿತ್ತು ಎಂಬ ಹೇಳಿಕೆ ನೀಡುತ್ತಾರೆ. ಅದಕ್ಕೆ ನಿಮ್ಮ ಬಳಿ ದಾಖಲೆ ಇದೆಯಾ ಎಂದು ಪ್ರಶ್ನಿಸಿದ ಬಸವರಾಜ ಸೂಳಿಭಾವಿ, ಧಾರ್ಮಿಕ ಸಂಸ್ಥೆಗಳು ದೇಶವನ್ನು ಒಡೆಯುವ ಕೆಲಸ ಮಾಡಿದರೆ ಸಂವಿಧಾನ ದೇಶವನ್ನು ಒಂದೂಗೂಡಿಸುವಂತೆ ಮಾಡಿದೆ. ಹಿಂದೂ ಧರ್ಮದಲ್ಲಿ ನೂರಾರು ಜಾತಿಗಳಿದ್ದು, ಅವೆಲ್ಲವುಗಳನ್ನು ಸೇರಿಸುವ ಕೆಲಸ ಸಂವಿಧಾನ ಮಾಡಿದೆ. ಇಂತಹ ಸಂವಿಧಾನ ಬದಲಾವಣೆ ಬಯಸುವುದು ಸರಿಯಾದ ಕ್ರಮವಲ್ಲ. ಆರ್‌ಎಸ್‌ಎಸ್‌ನ ಮೂಲ ಉದ್ದೇಶವನ್ನು ಶ್ರೀಗಳು ಹೇಳಿದ್ದು, ಇದು ಅತ್ಯಂತ ಅಪಾಯಕಾರಿ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶೇಖಣ್ಣ ಕವಳಿಕಾಯಿ, ಬಾಲರಾಜ ಅರಬರ, ಆನಂದ ಶಿಂಗಾಡಿ, ಶರೀಫ ಬಿಳೆಯಲಿ, ಶಿವಾನಂದ ತಮ್ಮಣ್ಣನವರ, ನಾಗರಾಜ ಗೋಕಾವಿ, ಪರಸುರಾಮ ಕಾಳೆ, ಅನಿಲ ಕಾಳೆ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here