ಕರಾವಳಿ ಭಾಗದ ಕಾರಣಿಕ ಶಕ್ತಿಯಾಗಿರುವ ಕೊರಗಜ್ಜ ದೈವದ ಕಥೆ ಆಧರಿಸಿದ ‘ಕೊರಗಜ್ಜ’ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ನಡುವೆಯೇ, ಚಿತ್ರದ ಪ್ರಚಾರ ಕ್ರಮವೇ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡಿ ಹಂಚಿಕೊಂಡವರಿಗೆ ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಚಿತ್ರತಂಡ ಘೋಷಿಸಿದ್ದು, ಇದನ್ನು ಕೊಡಗು ಜಿಲ್ಲಾ ದೈವ ಆರಾಧಕರು ಹಾಗೂ ದೈವ ನರ್ತಕರ ಸಂಘ ತೀವ್ರವಾಗಿ ಖಂಡಿಸಿದೆ.
ಚಿತ್ರದ ಪ್ರಚಾರಕ್ಕಾಗಿ ‘ಕೊರಗಜ್ಜ ರೀಲ್ಸ್’ ಎಂಬ ಸ್ಪರ್ಧೆಯನ್ನು ಆಯೋಜಿಸಿರುವ ಚಿತ್ರತಂಡ, ಆರು ಹಾಡುಗಳನ್ನು ಬಳಸಿಕೊಂಡು ರೀಲ್ಸ್ ಮಾಡುವಂತೆ ಆಹ್ವಾನ ನೀಡಿದೆ. ಉತ್ತಮ ರೀಲ್ಸ್ ಮಾಡಿ ಹಂಚಿಕೊಂಡವರಿಗೆ ಚಿತ್ರತಂಡ ಆಯ್ಕೆ ಆಧಾರದಲ್ಲಿ ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಹೇಳಲಾಗಿದೆ.
ಆದರೆ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಹೆಸರಿನಲ್ಲಿ ರೀಲ್ಸ್ ಮಾಡಿ ಲೈಕ್ಸ್, ವೀವ್ಸ್ ಗಳನ್ನು ಹೆಚ್ಚಿಸಿಕೊಳ್ಳುವ ಸಂಸ್ಕೃತಿ ದೈವದ ಪಾವಿತ್ರ್ಯಕ್ಕೆ ಧಕ್ಕೆ ತರುವಂತದ್ದು ಎಂದು ದೈವ ನರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕಾಂತಾರ’ ಸಿನಿಮಾದ ಬಳಿಕ ದೈವಗಳ ವೇಷಭೂಷಣವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪಮಾನಕಾರಿ ರೀಲ್ಸ್ ಹೆಚ್ಚಾಗಿದ್ದುದನ್ನು ಅವರು ಸ್ಮರಿಸಿದರು.
ಈ ತಪ್ಪು ಕ್ರಮವನ್ನು ತಕ್ಷಣ ನಿಲ್ಲಿಸದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಕೊಡಗು ಜಿಲ್ಲಾ ದೈವ ಆರಾಧಕರು ಹಾಗೂ ದೈವ ನರ್ತಕರ ಸಂಘ ಎಚ್ಚರಿಕೆ ನೀಡಿದೆ. ದೈವದ ಗೌರವ ಹಾಗೂ ಪರಂಪರೆಯ ರಕ್ಷಣೆಗೆ ಅಗತ್ಯವಾದ ಎಲ್ಲಾ ಹೋರಾಟಗಳಿಗೆ ಮುಂದಾಗುವುದಾಗಿ ಸಂಘದ ಪ್ರಮುಖರು ತಿಳಿಸಿದ್ದಾರೆ.



