ಪಾಟ್ನಾ: ಬಿಹಾರದ ಬೇಗುಸರಾಯ್‌ನಲ್ಲಿ ಮದುವೆಯಾದ 8 ತಿಂಗಳಿಗೆ ಅಂತರ್ಜಾತಿ ಮದುವೆಯಾಗಿದ್ದ ಜೋಡಿ ಫೇಸ್‌ಬುಕ್‌ನಲ್ಲಿ ವಿದಾಯದ ಪೋಸ್ಟ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಶುಭಂ ಕುಮಾರ್ (19), ಪತ್ನಿ ಮುನ್ನಿ ಕುಮಾರಿ (18) ಮೃತರು. ಕೆಲ ವರ್ಷದ ಹಿಂದೆ ಇನ್ಸ್ಟಾಗ್ರಾಂ ಮೂಲಕ ಇವರಿಬ್ಬರ ಪರಿಚಯವಾಗಿತ್ತು.
ಈ ಪರಿಚಯ ಪ್ರೇಮಕ್ಕೆ ತಿರುಗಿ, 2024ರ ಅಕ್ಟೋಬರ್‌ನಲ್ಲಿ ಮನೆಯವರ ವಿರೋಧದ ನಡುವೆಯೇ ಇಬ್ಬರು ಓಡಿಹೋಗಿ ವಿವಾಹವಾಗಿದ್ದರು. ಮದುವೆಯ ನಂತರ, ಮುನ್ನಿ ಮನೆಯವರು ಇದನ್ನು ವಿರೋಧಿಸಿದ್ದರು. ಅಲ್ಲದೇ ರಾಜಿ ಪಂಚಾಯಿತಿ ನಡೆಸಿ, ಯುವತಿಯ ಸಿಂಧೂರವನ್ನು ಅಳಿಸಿ, ಆಕೆಯನ್ನು ಮನೆಯವರು ಕರೆದುಕೊಂಡು ಹೋಗಿದ್ದರು. ಬಳಿಕ ಡಿಸೆಂಬರ್‌ನಲ್ಲಿ ಮತ್ತೆ ಒಂದಾಗಿ, ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು.
ದಂಪತಿಯ ಸಂಬಂಧಿಕರೊಬ್ಬರು ಮಗುವಿನ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿ, ಶುಭಂ ಮನೆಗೆ ಬಂದಿದ್ದರು. ಈ ವೇಳೆ ಅವರು ಎಷ್ಟೇ ಬಾಗಿಲು ಬಡಿದರೂ, ತೆರೆಯದಿದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿದಾಗ ಶುಭಂ ನೇಣು ಬಿಗಿದುಕೊಂಡಿದ್ದ. ಆತನ ಪತ್ನಿ ಮುನ್ನಿ ಹಾಸಿಗೆಯ ಮೇಲೆ ನಿರ್ಜೀವವಾಗಿ ಬಿದ್ದಿದ್ದದನ್ನು ಗಮನಿಸಿದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ಶುಭಂ, ಇಬ್ಬರ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ `ಅಲ್ವಿದಾ’ ಅಂದರೆ ಗುಡ್‌ಬೈ ಎಂದು ಬರೆದುಕೊಂಡಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.