ವಿಜಯಸಾಕ್ಷಿ ಸುದ್ದಿ, ಗದಗ : ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು, ಅವುಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನೌಕರನ ನೈತಿಕ ಜವಾಬ್ದಾರಿಯಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಮುಖ್ಯಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಕರಣಗಳ ವಿಲೇವಾರಿ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಕುರಿತು ಹಮ್ಮಿಕೊಂಡಿದ್ದ ಸಭೆಯನ್ನು ಉದ್ಘಾಟಿಸಿ, ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳಿಂದ ಜಾರಿಯಾಗಿರುವ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸುವಾಗ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಸೌಲಭ್ಯಗಳನ್ನು ತಲುಪಿಸುವಾಗ ವಿನಾಕಾರಣ ವಿಳಂಬ ಮಾಡಿದರೆ ಅಥವಾ ಸೌಲಭ್ಯಗಳನ್ನು ಒದಗಿಸದೇ ಇದ್ದಲ್ಲಿ ಅಂತಹ ವ್ಯಕ್ತಿಯ ಹಕ್ಕುಗಳನ್ನು ಮೊಟಕುಗೊಳಿಸಿದಂತಾಗಿ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ನೊಂದ ವ್ಯಕ್ತಿಗಳು ಪ್ರಕರಣ ದಾಖಲಿಸಿದ ಮೇಲೆ ಶೀಘ್ರದಲ್ಲಿ ಇತ್ಯರ್ಥವಾಗಬೇಕು. ಪ್ರಕರಣ ಇತ್ಯರ್ಥಪಡಿಸುವಾಗ ಸಂಬಂಧಿತ ಅಧಿಕಾರಿಗಳಿಂದ ವರದಿ ಪಡೆದು ತನಿಖೆ ನಡೆಸಲಾಗುವುದು ಎಂದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್.ಕೆ. ವಂಟಿಗೋಡಿ ಮಾತನಾಡಿ, ಜಿಲ್ಲೆಯ ವಿವಿಧ ಇಲಾಖೆಯ ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳಿಗೆ, ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಹಾಗೂ ಕಾರಾಗೃಹದಲ್ಲಿನ ಬಂಧಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಇಲಾಖೆಯ ಮುಖ್ಯಸ್ಥರ ಆದ್ಯ ಕರ್ತವ್ಯವಾಗಿದೆ. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರಿಗೂ ಸಹ ಮೂಲಭೂತ ಸೌಲಭ್ಯ ಒದಗಿಸಬೇಕಾಗುತ್ತದೆ.
ಕಾರ್ಮಿಕ ಅಧಿಕಾರಿಗಳು ಅಂತಹ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ ಹಾಗೂ ವಸತಿ ನಿಲಯಕ್ಕೆ ಸಂಬಂಧಿತ ಪ್ರಕರಣಗಳ ಕುರಿತು ಇಲಾಖೆಯವರು ಆಯೋಗಕ್ಕೆ ವರದಿ ಸಲ್ಲಿಸುವಾಗ ಅಲ್ಲಿನ ಸಿಸಿಟಿವಿ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸಾರ್ವಜನಿಕರಿಗೆ ಕುಡಿಯುವ ನೀರು, ರಸ್ತೆ ಸ್ವಚ್ಛತೆ, ಒಳಚರಂಡಿ ವ್ಯವಸ್ಥೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಇಂತಹ ಮೂಲಭೂತ ಸೌಲಭ್ಯ ಒದಗಿಸುವುದು ಅವಶ್ಯಕವಾಗಿವೆ. ಮೂಲಭೂತ ಸೌಲಭ್ಯಗಳನ್ನು ಒದಗಿಸುವಾಗ ಕರ್ತವ್ಯ ಲೋಪವಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ.
ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಮಾನವ ಹಕ್ಕುಗಳ ಆಯೋಗದಿಂದ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅರುಣ ಪೂಜಾರ್ ಮಾತನಾಡಿ, ಗದಗ ಜಿಲ್ಲೆಯಲ್ಲಿ ಮಾನವ ಹಕ್ಕು ಉಲ್ಲಂಘನೆಯಾದ 14 ಪ್ರಕರಣಗಳು ತನಿಖೆಯಲ್ಲಿವೆ. ಮಾನವೀಯತೆಯೇ ಮಾನವ ಹಕ್ಕು ಆಯೋಗದ ಧ್ಯೇಯವಾಗಿದ್ದು, ಕಾನೂನಿನಡಿ ಸರ್ವರಿಗೂ ಸಮಾನ ಹಕ್ಕು ಒದಗಿಸಲಾಗಿದೆ.
ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಅಧಿಕಾರಿಯ ಆದ್ಯ ಕರ್ತವ್ಯವಾಗಿದೆ ಎಂದರು.
ಸಭೆಯಲ್ಲಿ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಎ.ದಿನೇಶ ಸಂಪತ್‌ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ. ಪಲ್ಲೇದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಸ್ವಾಗತಿಸಿದರು. ಪ್ರಾಚಾರ್ಯ ಬಿ.ಜಿ. ಗಿರಿತಿಮ್ಮಣ್ಣವರ ನಿರ್ವಹಿಸಿದರು. ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ ವಂದಿಸಿದರು.
ಸಂವಾದದ ನಂತರ ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸಿದ ಜಿಲ್ಲೆಯ ಒಟ್ಟು 14ಪ್ರಕರಣಗಳ ವಿಚಾರಣೆ ನಡೆಸಿದರು.
ಸಾರ್ವಜನಿಕರು ಸರ್ಕಾರಿ ಇಲಾಖೆಗಳಿಗೆ ಮಾಹಿತಿ ಕೇಳಿದಾಗ ಶೀಘ್ರವಾಗಿ ವರದಿಯನ್ನು ಆಯೋಗಕ್ಕೆ ಸಲ್ಲಿಸಬೇಕು. ಕೆಲಸದೊತ್ತದಲ್ಲಿಯೂ ಸಹ ಸೌಜನ್ಯದಿಂದ ವರ್ತಿಸಬೇಕಾಗುತ್ತದೆ. ದೂರುಗಳು ಬಂದಾಗ ಸೂಕ್ತ ಮಾಹಿತಿ ಒದಗಿಸಿ ಇನ್ನಷ್ಟು ದೂರುಗಳು ಬಾರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಈ ಮೊದಲು ದೂರು ಕೊಟ್ಟವರು ಪರಿಹಾರಕ್ಕಾಗಿ ಬೆಂಗಳೂರಿಗೆ ಹೋಗುವ ಪರಿಪಾಠ ಇತ್ತು. ಆದರೆ ಇದೀಗ ಜಿಲ್ಲಾ ಮಟ್ಟದಲ್ಲಿ ಸರ್ಕಾರದ ವಿವಿಧ ಸೌಲಭ್ಯಗಳು ಯಾವ ರೀತಿ ಸಾರ್ವಜನಿಕರಿಗೆ ತಲುಪುತ್ತಿವೆ ಎನ್ನುವುದರ ಕುರಿತು ಪರಿಶೀಲನೆ ನಡೆಸಲು ವಿವಿಧ ಜಿಲ್ಲೆಗಳಲ್ಲಿ ಆಯೋಗದಿಂದ ಪ್ರವಾಸ ಕೈಗೊಳ್ಳಲಾಗುತ್ತಿದೆ.
– ಟಿ.ಶ್ಯಾಮ್ ಭಟ್.
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್.ಕೆ. ವಂಟಿಗೋಡಿ ಮಾತನಾಡಿ, ಒಬ್ಬ ವ್ಯಕ್ತಿ ಜನನದಿಂದ ಬರುವ ಎಲ್ಲ ಹಕ್ಕುಗಳು ಮಾನವ ಹಕ್ಕುಗಳಾಗುತ್ತದೆ. ಬದುಕುವ ಹಕ್ಕು, ಸಮಾನತೆ ಹಕ್ಕು, ಗೌರವಯುತವಾಗಿ ಬಾಳುವ ಹಕ್ಕು, ಗೌರವಯುತ ಹುದ್ದೆ ಅಲಂಕರಿಸುವ ಹಕ್ಕು, ಅಭಿವ್ಯಕ್ತಿ ಹಕ್ಕು ಈ ಮೊದಲಾದ ಹಕ್ಕುಗಳೇ ಸಂವಿಧಾನದ ಮೂಲಭೂತ ಹಕ್ಕುಗಳನ್ನಾಗಿ ಮಾಡಲಾಗಿದೆ. ಈ ಹಕ್ಕುಗಳಿಗೆ ಧಕ್ಕೆಯಾದಾಗ ಅವುಗಳನ್ನು ಮೊಟಕುಗೊಳಿಸಿದಂತಾಗುತ್ತದೆ. ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಆಯಾ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.