ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಆಗಸ್ಟ್ 19 ರಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆ ಮಾಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಪರಿಶಿಷ್ಟ ಜಾತಿಯ ಸಮುದಾಯದ ಎಡಗೈ ಬಲಗೈ ಸೇರಿದಂತೆ ಮತ್ತಿತರ 101 ಉಪ ಜಾತಿಗಳ ಜನಸಂಖ್ಯೆಯ ಆಧಾರದ ಮೇಲೆ ಮತ್ತು ನ್ಯಾ.ನಾಗಮೋಹನದಾಸ್ ಅವರ ಶಿಫಾರಸು ಮೇರೆಗೆ ಸರ್ಕಾರ ಮೀಸಲಾತಿ ನಿಗದಿ ಮಾಡಿರುವುದು ಸಂತಸ ತಂದಿದೆ ಎಂದರು. ಪರಿಶಿಷ್ಟ ಜಾತಿಯವರ ನಾಲ್ಕು ದಶಕಗಳ ಮೀಸಲಾತಿ ಹೋರಾಟಕ್ಕೆ ಇದರಿಂದ ಜಯ ಸಿಕ್ಕಂತಾಗಿದೆ ಎಂದರು.
ಇನ್ನೂ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕಲ್ಪಿಸುವ ಬಗ್ಗೆ ಆಗಸ್ಟ್ 19 ರಂದು ನಡೆದ ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನವಾಗಿದೆ. ಎಸ್ ಸಿ ಬಲಗೈ ಹಾಗೂ ಎಡಗೈ ಸಮುದಾಯಗಳಿಗೆ ಸಮಾನವಾಗಿ ಶೇ.6ರಷ್ಟು ಮೀಸಲಾತಿ. ಇನ್ನು ಅಸ್ಪೃಶ್ಯ ಜಾತಿಗಳಿಗೆ ಶೇ.5ರಷ್ಟು ಮೀಸಲಾತಿಗೆ ತೀರ್ಮಾನಿಸಲಾಗಿದೆ. ಆದ್ರೆ, ಇದಕ್ಕೆ ಕೆಲ ದಲಿತ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ. ಅಲೆಮಾರಿಗಳು ಸೇರಿದಂತೆ ಇತರೆ ಜಾತಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶಗಳು ವ್ಯಕ್ತವಾಗಿವೆ. ಇದರ ನಡುವೆಯೂ ಸಿಎಂ ಸಿದ್ದರಾಮಯ್ಯ ಆಗಸ್ಟ್ 20 ರಂದು ಸದನದಲ್ಲಿ ಮೀಸಲಾತಿ ಬಗ್ಗೆ ತೆಗೆದುಕೊಂಡು ನಿರ್ಣಯವನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಮುಖ್ಯವಾಗಿ ಈ ವೇಳೆ ಏನಾದರೂ ಬದಲಾವಣೆ ಮಾಡಬೇಕಾದ್ರೆ ಮುಂದಿನ ಹಂತದಲ್ಲಿ ತೀರ್ಮಾನ ಮಾಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.