ಮಂಡ್ಯ: ಎನ್‌ಡಿಎ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲವೇ? ಎಂಬ ಪ್ರಶ್ನೆ ಮತ್ತೆ ತಲೆ ಎತ್ತಿದೆ. ಮಾಜಿ ಸಚಿವ ಕೆ.ಸಿ.ನಾರಾಯಣ್ ಗೌಡ ಅವರು ನಿಖಿಲ್ ಕುಮಾರಸ್ವಾಮಿ ವಿರುದ್ಧ ನೀಡಿರುವ ಹೇಳಿಕೆಗಳು ಜೆಡಿಎಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಮೈತ್ರಿ ಧರ್ಮ ಪಾಲಿಸದೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, “ನಾರಾಯಣ್ ಗೌಡ್ರು, ನಾವು ಎಲ್ಲರೂ ಬಿಜೆಪಿ–ಜೆಡಿಎಸ್ ಸೇರಿ ಒಂದೇ ಎನ್‌ಡಿಎ. ಸಣ್ಣಪುಟ್ಟ ನೋವು ಇದ್ದರೆ ಪಕ್ಷದ ಒಳಗೆ ಚರ್ಚಿಸಬೇಕು. ನಾಯಕರು ಬಗ್ಗೆ ಬಹಿರಂಗವಾಗಿ ಮಾತನಾಡಿರುವುದು ನಮಗೆ ತುಂಬಾ ನೋವಾಗಿದೆ” ಎಂದು ಕಿಡಿಕಾರಿದರು.
“ಮಂಡ್ಯ ಜಿಲ್ಲೆಯಲ್ಲಿ ಯಾಕೆ ಇಂತಹ ಗೊಂದಲ ಸೃಷ್ಟಿಯಾಗುತ್ತಿದೆ? ನಮಗೆ ಅನುಮಾನ ಕಾಡುತ್ತಿದೆ. ಸ್ಥಳೀಯ ಚುನಾವಣೆಗಳನ್ನು ಪ್ರತ್ಯೇಕವಾಗಿ ನಡೆಸುವ ಮಾತುಗಳು ಎಷ್ಟು ಸರಿ? ಅಭ್ಯರ್ಥಿ ಘೋಷಣೆ ನಮ್ಮ ನಾಯಕರ ತೀರ್ಮಾನ. ಈ ವಿಷಯದಲ್ಲಿ ರಾಷ್ಟ್ರೀಯ ನಾಯಕರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದು ಅವರು ಹೇಳಿದರು.
ನಿಖಿಲ್ ಕುಮಾರಸ್ವಾಮಿ ಕುರಿತು ಮಾತನಾಡಿದ ಡಿ.ರಮೇಶ್, “ಅವರು ನಮ್ಮ ಪಕ್ಷದ ನಾಯಕ. ರಾಜ್ಯ ಯುವ ಘಟಕದ ಅಧ್ಯಕ್ಷ. ಪಕ್ಷ ಸಂಘಟನೆ ವೇಳೆ ಹೇಳಿಕೆ ಕೊಡುವುದು ಸಹಜ. ನಿಮ್ಮ ನಾಯಕರು ಕೂಡ ಅಂಥ ಹೇಳಿಕೆ ಕೊಡ್ತಾರೆ. ದೇವೇಗೌಡ್ರು ಮತ್ತು ಕುಮಾರಸ್ವಾಮಿಗೆ ಇರುವ ಗೌರವವೇ ನಿಖಿಲ್‌ಗೂ ಇದೆ” ಎಂದು ಸ್ಪಷ್ಟಪಡಿಸಿದರು.
“ನಾರಾಯಣ್ ಗೌಡ್ರು ನಿರಂತರವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ದೂರು ನೀಡುವುದು ಅನಿವಾರ್ಯ. ಇನ್ನೊಂದು ಪಕ್ಷದ ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು. ಮೈತ್ರಿ ಧರ್ಮ ಪಾಲಿಸಬೇಕು. ಬಿಜೆಪಿ ನೋವಾದ್ರೆ ಜೆಡಿಎಸ್‌ಗೆ ನೋವಾಗುತ್ತದೆ, ಜೆಡಿಎಸ್ ನೋವಾದ್ರೆ ಬಿಜೆಪಿ ಕಾರ್ಯಕರ್ತರಿಗೂ ನೋವಾಗುತ್ತದೆ” ಎಂದು ಎಚ್ಚರಿಸಿದರು.



