ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್ 26ರಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿ ಜೀವನ ಬಹು ಅಮೂಲ್ಯವಾಗಿದ್ದು, ಇದನ್ನು ಸರಿಯಾಗಿ ಬಳಕೆ ಮಾಡಿಕೊಂಡಲ್ಲಿ ದೇಶಕ್ಕೆ ಉತ್ತಮ ನಾಗರಿಕರಾಗಲು ಸಾಧ್ಯವಾಗುತ್ತದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು.
ಪಟ್ಟಣದ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ.ಅಗಡಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಹೊಸ ಹೊಸ ವಿಷಯಗಳ ಬಗ್ಗೆ ಗಮನ ಹರಿಸಿ ಅದರಿಂದ ಆಕರ್ಷಿತರಾಗಿ ದುಶ್ಚಟಗಳ ದಾಸರಾಗುತ್ತಿರುವದನ್ನು ನೋಡುತ್ತಿದ್ದೇವೆ. ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ, ಸಮಯ ಹಾಳು ಮಾಡಿಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಕುಡಿತ, ಗುಟ್ಕಾ, ಗಾಂಜಾ, ಅಫೀಮು ಇತ್ಯಾದಿಗಳಿಂದ ಬಹುಬೇಗ ಆಕರ್ಷಿತರಾಗುವ ಸಂಭವಿರುತ್ತದೆ. ಹೊಸದನ್ನು ಅನುಭವಿಸಬೇಕು ಎನ್ನುವ ತುಡಿತ ಬಂದು ನಿಮ್ಮನ್ನು ಕೆಟ್ಟ ದಾರಿಯಲ್ಲಿ ಸಾಗುವಂತೆ ಮಾಡುತ್ತದೆ. ಮಾದಕ ದ್ರವ್ಯಗಳ ಅಭ್ಯಾಸದಿಂದ ಸಮಾಜದಲ್ಲಿ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿವೆ. ಇದರಿಂದ ಅವರ ಜೀವನ ಹಾಳು ಮಾಡಿಕೊಂಡಿರುವ ಅನೇಕ ಘಟನೆಗಳನ್ನು ನೋಡಬಹುದಾಗಿದೆ. ಅದಕ್ಕಾಗಿ ಸಾಧ್ಯವಾದಷ್ಟು ಮಾದಕ ವ್ಯಸನಕ್ಕೆ ಬಲಿಯಾಗದೆ ಎಚ್ಚರಿಕೆಯಿಂದ ಸಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಗಡಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪರಶುರಾಮ ಬಾರ್ಕಿಯವರು ವಹಿಸಿದ್ದರು. ಪ.ಪೂ. ಕಾಲೇಜ ಪ್ರಾಚಾರ್ಯರಾದ ಡಾ.ಎನ್. ಹಯವದನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಐ ನಾಗರಾಜ ಮಾಡಳ್ಳಿ ಮಾತನಾಡಿದರು. ಮಹಾವಿದ್ಯಾಲಯದ ಬೋಧಕ ಹಾಗೂ ಭೋದಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು. ಉಪನ್ಯಾಸಕ ಸಿ.ಎಸ್. ಹಿರೇಮಠ ನಿರೂಪಿಸಿದರು.