ವಿಜಯಸಾಕ್ಷಿ ಸುದ್ದಿ, ಗದಗ : ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿಯನ್ನು ರಾಜ್ಯಾದ್ಯಂತ ನಿರ್ಮಿಸಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಸಂಕಲ್ಪ ಮಾಡಿ ರಾಷ್ಟ್ರಸೇವೆಯಲ್ಲಿ ತೊಡಗಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ರವಿವಾರ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಜಾಪ್ರಭುತ್ವವು ಜನ ಸಾಮಾನ್ಯರಿಗೆ ಬಲ ತುಂಬುವ ವ್ಯವಸ್ಥೆಯಾಗಿದ್ದು, ಹಾಗಾಗಿ ಸಾರ್ವಜನಿಕರಿಗೆ ಪ್ರಜಾಪ್ರಭುತ್ವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು.
ಮಹಾತ್ಮಾ ಗಾಂದೀಜಿಯವರು ಬ್ರಿಟಿಷರಿಂದ ಸ್ವಾತಂತ್ರ್ಯ ನೀಡಿದ ಸಂದರ್ಭದಲ್ಲಿ ಮುಂಡರಗಿ ಭೀಮರಾಯರ ನೇತೃತ್ವದಲ್ಲಿ ಬಹುದೊಡ್ಡ ಹೋರಾಟ ಕೈಗೊಳ್ಳಲಾಗಿದೆ. ಅದನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವವು ಕಡು ಬಡವನಿಗೆ, ದಲಿತರಿಗೆ, ಶೋಷಿತರಿಗೆ ಬಲ ತುಂಬುತ್ತದೆ. ಈ ವ್ಯವಸ್ಥೆಯನ್ನು ಕೆಡಿಸುವ ಮನಸ್ಸಿನವರಿಗೆ ತಕ್ಕ ಉತ್ತರ ನೀಡಿ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಆಶಯಗಳು ಈಡೇರಿಸಿ, ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಮುಟ್ಟಬೇಕು ಎಂದು ನುಡಿದರು.
ಮಾನವ ಸರಪಳಿ ನಿರ್ಮಿಸಿದ ಸಂದರ್ಭದಲ್ಲಿ ಎಲ್ಲರೂ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಸಂಕಲ್ಪ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಭದ್ರಗೊಳಿಸಿ, ರಾಷ್ಟç ನಿರ್ಮಾಣದಲ್ಲಿ ತೊಡಗಬೇಕು ಎಂದು ಸಚಿವರು ಕರೆ ನೀಡಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಗದಗ ಜಿಲ್ಲೆಯ ಬಾಲೆಹೊಸೂರು ಗ್ರಾಮದಿಂದ ಮುಂಡರಗಿ ಮಾರ್ಗವಾಗಿ ಕೊಪ್ಪಳ ಜಿಲ್ಲೆ ಅಳವಂಡಿವರೆಗೆ ಒಟ್ಟು 61 ಕಿ.ಮೀ ಮಾನವ ಸರಪಳಿಯನ್ನು ರಚಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಿಂದ 1,12,652 ಜನರು ನೊಂದಾಯಿಸಿದ್ದು, ಗದಗ ಜಿಲ್ಲೆ ನೋಂದಣಿಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ ಎಂದು ಸಚಿವ ಡಾ. ಎಚ್.ಕೆ. ಪಾಟೀಲ ಹೆಮ್ಮೆಯನ್ನು ವ್ಯಕ್ತಪಡಿಸಿದರು.
ಇದೇ ವೇಳೆ ಸಂವಿಧಾನದ ಮಹತ್ವ ಸಾರುವ ಪ್ರಸ್ತಾವನೆ ಓದಿ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಗಾರಿಕೆ ನೆನಪಿಸುವ ಜಾಗೃತಿ ಮೂಡಿಸಿ ಸ್ಥಳದಲ್ಲಿದ್ದ ಮಾನವ ಸರಪಳಿಯಲ್ಲಿ ಪಾಲ್ಗೊಂಡು ಘೋಷಣೆ ಕೂಗಿ ನಂತರ ಪ್ರವಾಸಿ ಮಂದಿರದಲ್ಲಿ ಗಿಡಗಳನ್ನು ನೆಟ್ಟುರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಹೇಶ ಪೊತದಾರ ಹಾಜರಿದ್ದರು.
ನಮ್ಮ ದೇಶದಲ್ಲಿ ಅನೇಕ ಧರ್ಮ, ಸಾವಿರಾರು ಜಾತಿ, ನೂರಾರು ಭಾಷೆಗಳು ಇದ್ದರೂ ಎಲ್ಲರೂ ಒಂದಾಗಿ ಪರಸ್ಪರ ನಂಬಿಕೆ ವಿಶ್ವಾಸ ಗೌರವ ಪ್ರೀತಿಯಿಂದ ನಡೆದುಕೊಳ್ಳುತ್ತೇವೆ. ಎಲ್ಲಿಯವರೆಗೆ ಈ ಭ್ರಾತೃತ್ವ ಭಾವನೆ ಇರುತ್ತದೆಯೋ ಅಲ್ಲಿಯವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿರುತ್ತದೆ.
– ಡಾ.ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.
ರಾಜ್ಯ ಖನಿಜ ಅಬಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್. ಪಾಟೀಲ ಮಾತನಾಡಿ, ಮಹತ್ವದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಮುಂಡರಗಿ ಪಟ್ಟಣದಲ್ಲಿ ಆಯೋಜಿಸಿ ಮಾನವ ಸರಪಳಿ ನಿರ್ಮಿಸಿ ಪ್ರಜಾಪ್ರಭುತ್ವದ ಪ್ರಾಮುಖ್ಯತೆ ಸಾರಲು ಪಾಲ್ಗೊಂಡ ಎಲ್ಲರಿಗೂ ಅಭಿನಂದನೆಗಳು ಎಂದರು.