ವಿಜಯಸಾಕ್ಷಿ ಸುದ್ದಿ, ಧಾರವಾಡ : ಕ್ರಿಮಿಯನ್ ಯುದ್ಧದಲ್ಲಿ ಗಾಯಗೊಂಡ ರೋಗಿಗಳಿಗೆ ದೀಪವನ್ನು ಹಿಡಿದು ಆರೈಕೆ ಮಾಡಿ ಸಾವಿನಂಚಿನಲ್ಲಿ ನರಳುತ್ತಿದ್ದ ರೋಗಿಗಳನ್ನು ಪ್ಲಾರೆನ್ಸ್ ನೈಟಿಂಗೇಲ್ ಅವರ ಸೇವೆಯ ಮೂಲಕ ಎಷ್ಟೋ ಜನ ಸೈನಿಕರ ಪ್ರಾಣವನ್ನು ಉಳಿಸಲು ಹಗಲಿರುಳು ಸೇವೆಯನ್ನು ಸಲ್ಲಿಸಿದರು. ಈ ದೀಪಧಾರಿಣಿ ಮಹಿಳೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕ ಡಾ. ಅರುಣ್ ಕುಮಾರ್ ಸಿ. ಹೇಳಿದರು.
ಅವರು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯಲ್ಲಿ ಪ್ಲಾರೆನ್ಸ್ ನೈಟಿಂಗೇಲ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಾತನಾಡಿದರು.
ಶುಶ್ರೂಷಕರು ಆಸ್ಪತ್ರೆಗಳ ಆಧಾರ ಸ್ಥಂಭಗಳಂತೆ. ದಿನದ 24 ಗಂಟೆಗಳೂ ಶುಶ್ರೂಷಕರು ನಿಸ್ವಾರ್ಥ ಮನೋಭಾವದಿಂದ ರೋಗಿಗಳ ಆರೈಕೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಸಮುದಾಯದಿಂದ ಹಿಡಿದು ಉನ್ನತ ದರ್ಜೆ ಆಸ್ಪತ್ರೆಗಳ ಎಲ್ಲಾ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಎಲ್ಲಾ ಶುಶ್ರೂಷಕರ ಸೇವೆ ಅತಿ ಮುಖ್ಯವಾದದ್ದು ಎಂದರು.
ಡಿಮ್ಹಾನ್ಸ್ನ ವೈದ್ಯಕೀಯ ಅಧಿಕಾರಿ ಡಾ. ರಾಘವೇಂದ್ರ ನಾಯಕ್ ಮಾತನಾಡಿ, ರೋಗಿಗಳ ಸೇವೆಯಲ್ಲಿ ಶುಶ್ರೂಷಕರ ಕಾರ್ಯ ಅಮೋಘವಾದದ್ದು. ವೈದ್ಯಕೀಯ ಸೇವೆಯ ಪ್ರಗತಿಯಲ್ಲಿ ಸದಾ ರೋಗಿಗಳ ಸೇವೆಯನ್ನು ಮಾಡುವ ಶುಶ್ರೂಷಕ ಅಧಿಕಾರಿಗಳ ಪಾತ್ರ ಹಿರಿದಾದದು ಎಂದು ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಮ್ಹಾನ್ಸ್ನ ಶುಶ್ರೂಷಾಧೀಕ್ಷಕರಾದ ಗಾಯತ್ರಿ ಶಿಂಧೆ, ಪ್ರಶಾಂತ ಬೇವೂರು, ಸೈಕಿಯಾಟ್ರಿಕ್ ನರ್ಸಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಶ್ರೀವಾಣಿ ಆರ್. ಉಪಸ್ಥಿತರಿದ್ದರು.
ಸಿದ್ಧಾರ್ಥ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಿದರು. ಸವಿತಾ ಘೋರ್ಪಡೆ ಸ್ವಾಗತಿಸಿದರು. ಹನುಮಂತ ಮುದೇವ್ವಗೊಳ ಕಾರ್ಯಕ್ರಮವನ್ನು ನಿರೂಪಿಸಿದರು. ನೆಹರು ಹೆಚ್.ಜೆ ಸ್ವ ರಚಿತ ಗೀತೆಯೊಂದಿಗೆ ವಂದಿಸಿದರು. ಆಸ್ಪತ್ರೆಯ ಎಲ್ಲಾ ಶುಶ್ರೂಷಾಧಿಕಾರಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಸರ್ವ ಸಿಬ್ಬಂದಿಗಳು ಭಾಗವಹಿಸಿದ್ದರು.
ಡಾ.ಶ್ರೀಧರ ಕುಲಕರ್ಣಿ ಮಾತನಾಡಿ, ರೋಗಿಗಳು ಆಸ್ಪತ್ರೆಗಳಲ್ಲಿ ದಾಖಲಾಗಿ ಗುಣಮುಖ ಹೊಂದಿ ಸಮಾಜದಲ್ಲಿ ಎಲ್ಲರ ಜೊತೆ ಬೆರೆಯಲು ಶುಶ್ರೂಷಕರ ಸೇವೆ ಅತಿ ಮುಖ್ಯವಾದದ್ದು. ಶುಶ್ರೂಷಕರ ಸೇವೆ ಇಲ್ಲದೇ ಯಾವುದೇ ಆಸ್ಪತ್ರೆಗಳನ್ನು ನಡೆಸುವುದು ಸಾಧ್ಯವಿಲ್ಲ ಎಂದು ಹೇಳಿದರು.