ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಎಲ್ಲ ಮೂಲೆಗಳಲ್ಲೂ ಸಹ ಯೋಗ ಜನಪ್ರಿಯತೆ ಪಡೆದುಕೊಂಡಿದೆ. ಹೀಗಾಗಿ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ಭಾರತಕ್ಕಿದೆ. ಯೋಗದ ಜನಪ್ರೀಯತೆಯನ್ನು ಸಪ್ತ ಸಾಗರದಾಚೆಗೆ ಪಸರಿಸಿದ ಅನೇಕ ಯೋಗ ಗುರುಗಳ ಕೊಡುಗೆಯನ್ನು ಮರೆಯುವಂತಿಲ್ಲ ಎಂದು ತಹಸೀಲ್ದಾರ ಅನಿಲ ಬಡಿಗೇರ ಹೇಳಿದರು.
ಅವರು ಶುಕ್ರವಾರ ಶಿರಹಟ್ಟಿಯ ಎಸ್.ಎಂ. ಡಬಾಲಿ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತದ ವತಿಯಿಂದ ಜರುಗಿದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಭಾರತವು ಯೋಗ ಸಂಪ್ರದಾಯವನ್ನು ಶ್ರೀಮಂತಗೊಳಿಸಿದೆ. ಯೋಗ ದೈಹಿಕ ಭಂಗಿಗಳು, ಉಸಿರಾಟದ ತಂತ್ರಗಳು, ಧ್ಯಾನ, ನೈತಿಕ ತತ್ವವನ್ನು ಸಂಯೋಜಿಸುವ ಒಂದು ಆರೋಗ್ಯ ವಿಧಾನವಾಗಿದೆ. ಅದಕ್ಕಾಗಿಯೇ ಹಿರಿಯರು ಯೋಗ ಬಲ್ಲವನಿಗೆ ರೋಗವಿಲ್ಲವೆಂದು ಹೇಳಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ನಿತ್ಯವೂ ತಮ್ಮ ದೈನಂದಿನ ಜೀವನದಲ್ಲಿ ಯೋಗ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಎಂ.ಕೆ. ಲಮಾಣಿ ಕಾರ್ಯಕ್ರಮ ನಿರೂಪಿಸಿದರು.