ವಿಜಯಸಾಕ್ಷಿ ಸುದ್ದಿ, ಗದಗ : ಸೃಷ್ಟಿಯಲ್ಲಿರುವ ಸಕಲ ಜೀವರಾಶಿಗಳ ಒಳಿತನ್ನು ಭಗವಂತ ಬಯಸಿದರೆ ಮಾನವ ಒಂದು ಹೆಜ್ಜೆ ಮುಂದೆ ಬಂದು ಮೋಕ್ಷ, ಮುಕ್ತಿ, ಸುಖ, ಸಂತೋಷಗಳ ಆಶೆಯಿಂದ ಏನೆಲ್ಲವನ್ನು ಸೃಷ್ಟಿಸಿಕೊಂಡಿದ್ದಾನೆ. ಈ ನಿಟ್ಟಿನಲ್ಲಿ ನಮ್ಮ ಪೂರ್ವಜರು ಹಲವು ವಿಧದ ಕೊಡುಗೆಗಳನ್ನು ನೀಡಿದ್ದಾರೆ.
ಅವುಗಳಲ್ಲಿ ಯೋಗವು ಉತ್ಕೃಷ್ಟ ಕೊಡುಗೆಯಾಗಿದೆ ಎಂದು ಹೈದರಾಬಾದ ಗುರು ಮಂದಿರದ ಪೂಜ್ಯಶ್ರೀ ಶಿವಹಂಸಾರೂಢ ಪ್ರಭುಸ್ವಾಮಿಗಳು ತಿಳಿಸಿದರು.
ಇಲ್ಲಿನ ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ, ಲಿಂಗಾಯತ ಪ್ರಗತಿಶೀಲ ಸಂಘ ಗದಗ-ಬೆಟಗೇರಿ ವತಿಯಿಂದಗದಗ ಜಿಲ್ಲಾ ಯೋಗ ಒಕ್ಕೂಟ ಹಾಗೂ ಗದಗ ಜಿಲ್ಲಾ ಅಮೆಚೂರ್ ಯೋಗಾಸನ ಕ್ರೀಡಾ ಸಂಸ್ಥೆ ಗದಗ ಇವರ ಸಹಕಾರದೊಂದಿಗೆ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಜರುಗಿದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಗಳ ಸಮ್ಮುಖ ವಹಿಸಿ ಶ್ರೀಗಳು ಮಾತನಾಡಿದರು.
ಪೂಜ್ಯಶ್ರೀ ಮಹಾಂತದೇವರು ಮಾತನಾಡಿ, ಯೋಗದಲ್ಲಿ ಸಾಕಷ್ಟು ಪ್ರಕಾರಗಳಿವೆ. ಅವುಗಳಲ್ಲಿ ಶಿವಯೋಗ ಶ್ರೇಷ್ಠವಾದದ್ದು. ಶಿವಯೋಗ ಸಾಧನೆಯಿಂದ ಶಿವನೊಲುಮೆ ಜೊತೆಗೆ ಬದುಕಿನಲ್ಲಿ ಶಾಂತಿ, ನೆಮ್ಮದಿ, ಸಂತೃಪ್ತಿ, ಸಮೃದ್ಧಿಗಳನ್ನು ಪಡೆಯಲು ಸಾಧ್ಯವಾಗುವದು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಡಾ. ದೀಪಾ ಮೂರಶಿಳ್ಳಿನ ಮಾತನಾಡಿ, ಮಹಿಳೆಯರು ಯೋಗ ಸಾಧನೆ ಜೊತೆಯಲ್ಲಿ ತಮ್ಮ ಅಡುಗೆ ಮನೆಯನ್ನು ಉತ್ತಮ ಆಹಾರ ತಯಾರಿಕೆಯ ಆಲಯವನ್ನಾಗಿ ಮಾಡಿಕೊಂಡರೆ ಕುಟುಂಬ ಸದಸ್ಯರೆಲ್ಲರೂ ಆರೋಗ್ಯವಂತರಾಗುವರು. ಹೀಗಾದಲ್ಲಿ ಯೋಗ ದಿನಾಚರಣೆ ಧ್ಯೇಯ ವಾಣಿ `ಮಹಿಳೆಯರ ಸಬಲೀಕರಣಕ್ಕಾಗಿ ಯೋಗ’ ಎಂಬುದು ಸಾರ್ಥಕಗೊಳ್ಳುವುದೆಂದು ಸೂಚಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಗದಗ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ, ನಿವೃತ್ತ ಇಂಜಿನಿಯರ್ ವಿ.ಎಚ್. ಪಾಟೀಲ, ಸಿದ್ಧಲಿಂಗ ನಗರದಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳು, ತೋಂಟದಾರ್ಯ ಮಠದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಸದಸ್ಯರು, ಯೋಗ ಪಾಠಶಾಲೆಯ ಯೋಗ ಸಾಧಕ ವೃಂದ, ಶ್ರೀಮಠದ ಸದ್ಭಕ್ತ ವೃಂದ ಇನ್ನಿತರೆ ಯೋಗಾಸಕ್ತರು ಪಾಲ್ಗೊಂಡಿದ್ದರು.
ಸುನಂದಾ ಜ್ಯಾನೋಪಂತರ ಪ್ರಾರ್ಥಿಸಿದರು. ಡಾ. ಎಂ.ವಿ. ಐಹೊಳ್ಳಿ, ವಿ.ಎಂ. ಮುಂದಿನಮನಿ, ಯಶವಂತ ಮತ್ತೂರ, ಜಯಶ್ರೀ ಡಾವಣಗೇರಿ, ಅರುಣಾ ಇಂಗಳಳ್ಳಿ, ಅಜಿತಾ ಶಿವಪ್ರಸಾದ, ಗೌರಿ ಜಿರಂಕಳಿ ಮಾದರಿ ಯೋಗ ಪ್ರದರ್ಶನ ನೀಡಿದರು. ವಿಜಯಾ ಚನ್ನಶೆಟ್ಟಿ ಸ್ವಾಗತಿಸಿದರೆ, ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಕಾರ್ಯಕ್ರಮ ನಿರೂಪಿಸಿದರು.