ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಮನುಷ್ಯ ಆರೋಗ್ಯ ಕೆಡುವವರೆಗೂ ಆರೋಗ್ಯದ ಬಗ್ಗೆ ವಿಚಾರ ಮಾಡುವುದಿಲ್ಲ. ಮುಂಜಾಗೃತೆಯಿಂದ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ರೋಗವೇ ಬರದಂತೆ ಕಾಯುವುದು ಯೋಗ. ಆರೋಗ್ಯ ಉತ್ತಮವಾಗಿರಲು ಯೋಗಾಭ್ಯಾಸ ಮಾಡಬೇಕು ಎಂದು ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಪತಂಜಲಿ ಯೋಗ ಸಮಿತಿ, ಹಿಮಾಲಯ ಯೋಗ ಕೇಂದ್ರ, ಅನ್ಮೋಲ್‌ಯೋಗ ಕೇಂದ್ರ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದೆ ಋಷಿಮುನಿಗಳು ಯೋಗ ಸಾಧನೆ ಮಾಡಿದ್ದರು. ಅದನ್ನು ಪತಂಜಲಿ ಯೋಗ ಮಹರ್ಷಿಗಳು ಜನಸಾಮಾನ್ಯರಿಗೆ ತಂದು ಕೊಟ್ಟವರು. ಯೋಗ, ಪ್ರಾಣಯಾಮದಿಂದ ಏಕಾಗ್ರತೆ ಬರುತ್ತದೆ. ದುಡ್ಡಿನಿಂದ ಆರೋಗ್ಯ ಕೊಂಡುಕೊಳ್ಳಲು ಸಾಧ್ಯವಿಲ್ಲ. ಯೋಗದಿಂದ ಮಾತ್ರ ಆರೋಗ್ಯ ವೃದ್ಧಿ ಸಾಧ್ಯ ಎಂದರು.
ಅನ್ಮೋಲ್ ಯೋಗ ಕೇಂದ್ರದ ನಿರ್ದೇಶಕಿ ಮಂಗಳಾ ಸಜ್ಜನರ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಶ್ರೀ ಚನ್ನಬಸವ ದೇವರು, ಬಿಇಒ ಎಚ್.ಎಂ. ಫಡ್ನೇಶಿ, ಮಂಜುನಾಥ ಅಳವಂಡಿ, ಮಂಜುನಾಥ ಇಟಗಿ, ಇತರರು ಇದ್ದರು. ಮಂಜುಳಾ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ ಹುಬ್ಬಳ್ಳಿ ಸ್ವಾಗತಿಸಿದರು. ವೀಣಾ ಪಾಟೀಲ ನಿರೂಪಿಸಿದರು.