ಡೀಪ್‌ಫೇಕ್ ತಂತ್ರಜ್ಞಾನ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ರೀತಿಯ ವಂಚನೆಗೆ ದಾರಿ ಮಾಡಿಕೊಟ್ಟಿದೆ. “ಇಷ್ಟು ಹಣ ಹೂಡಿಕೆ ಮಾಡಿ, ಅಷ್ಟೇ ಲಾಭ ಗಳಿಸಿ” ಎಂಬ ಆಕರ್ಷಕ ಮಾತುಗಳೊಂದಿಗೆ ಹರಿದಾಡುತ್ತಿರುವ ಅನೇಕ ಸೆಲೆಬ್ರಿಟಿ ವಿಡಿಯೋಗಳು ನಿಜವಲ್ಲ — ಅವು ಡೀಪ್‌ಫೇಕ್ ಮೂಲಕ ತಯಾರಿಸಲಾದ ನಕಲಿ ವಿಡಿಯೋಗಳಾಗಿವೆ.
ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಬಳಸಿಕೊಂಡು ನಕಲಿ ವಿಡಿಯೋಗಳನ್ನು ಸೃಷ್ಟಿಸಲಾಗಿದೆ. ಇದರಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ.
ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಈ ವಂಚನೆ ವಿರುದ್ಧ ಧ್ವನಿ ಎತ್ತಿದ್ದಾರೆ. “200 ಡಾಲರ್ ಹೂಡಿಕೆ ಮಾಡಿ ಹತ್ತು ಪಟ್ಟು ಲಾಭ ಪಡೆಯಬಹುದು” ಎಂದು ತಾನು ಹೇಳುತ್ತಿರುವಂತೆ ತೋರಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ.
“ನನ್ನ ಚಿತ್ರ ಮತ್ತು ಧ್ವನಿಯನ್ನು ಬಳಸಿ ಹಣಕಾಸು ಹೂಡಿಕೆಗಳ ಪ್ರಚಾರ ಮಾಡುತ್ತಿರುವ ವಿಡಿಯೋಗಳು ಸಂಪೂರ್ಣವಾಗಿ ನಕಲಿ. ಇವು ನನ್ನ ಅರಿವಿಲ್ಲದೆ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ” ಎಂದು ಸುಧಾ ಮೂರ್ತಿ ತಿಳಿಸಿದ್ದಾರೆ. ಇಂತಹ ವಂಚನೆಗಳಿಂದ ಕೆಲವರು ಹಣ ಕಳೆದುಕೊಂಡಿರುವುದನ್ನೂ ಅವರು ಬಹಿರಂಗಪಡಿಸಿದ್ದಾರೆ.
“ನಾನು ಎಂದಿಗೂ ಹೂಡಿಕೆ, ಹಣಕಾಸು ಲಾಭಗಳ ಬಗ್ಗೆ ಮಾತನಾಡುವುದಿಲ್ಲ. ನನ್ನ ವಿಚಾರಗಳು ಕೆಲಸ, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಭಾರತೀಯ ಸಂಸ್ಕೃತಿಯ ಸುತ್ತ ಮಾತ್ರ ಇರುತ್ತವೆ” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಇಂತಹ ವಿಡಿಯೋಗಳನ್ನು ನಂಬಿ ಯಾವುದೇ ಹಣಕಾಸು ನಿರ್ಧಾರ ತೆಗೆದುಕೊಳ್ಳಬೇಡಿ. ಯಾವುದೇ ಹೊಸ ಯೋಜನೆ ಕಂಡುಬಂದರೆ ಬ್ಯಾಂಕ್ ಅಥವಾ ಅಧಿಕೃತ ಮೂಲಗಳಿಂದ ಪರಿಶೀಲಿಸಿ. ಅನುಮಾನಾಸ್ಪದ ವಿಷಯ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದಿದ್ದಾರೆ.
ಡೀಪ್‌ಫೇಕ್ ವಂಚನೆ ವಿರುದ್ಧ ಜಾಗೃತಿಯೇ ಅತ್ಯಂತ ದೊಡ್ಡ ರಕ್ಷಣೆ ಎಂಬ ಸಂದೇಶವನ್ನು ಸುಧಾ ಮೂರ್ತಿ ಸ್ಪಷ್ಟವಾಗಿ ನೀಡಿದ್ದಾರೆ.



