ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನಲ್ಲಿರುವ ಖಾಸಗಿ ಶಾಲಾ ವಾಹನಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಲ್ಲದೆ, ನಿಯಮ ಉಲ್ಲಂಘಿಸುವ ಶಾಲಾ ಆಡಳಿತ ಆಡಳಿತ ಮಂಡಳಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶನಿವಾರ ಶಿರಹಟ್ಟಿಯಲ್ಲಿ ಕರವೇ ತಾಲೂಕಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕಾ ಗೌರವಾಧ್ಯಕ್ಷ ಅಶೋಕ ಹುಬ್ಬಳ್ಳಿ, ಶಿರಹಟ್ಟಿ ನಗರ ಘಟಕದ ಅಧ್ಯಕ್ಷ ಮಾಬುಸಾಬ ಢಾಲಾಯತ, ಶಿರಹಟ್ಟಿ ತಾಲೂಕಿನಾದ್ಯಂತ ಸಾಕಷ್ಟು ಖಾಸಗಿ ಶಾಲೆಗಳಿದ್ದು, ಪ್ರತಿಯೊಂದು ಶಾಲೆಗಳು ವಾಹನವನ್ನು ಹೊಂದಿವೆ. ಆ ಶಾಲಾ ವಾಹನದಲ್ಲಿಯೇ ಶಾಲಾ ಮಕ್ಕಳನ್ನು ಶಾಲೆಗೆ ಕರೆತರುವುದು ಮತ್ತು ಬಿಟ್ಟು ಬರುವ ಕೆಲಸ ಮಾಡುತ್ತಿದ್ದು, ಶಾಲಾ ಆಡಳಿತ ಮಂಡಳಿಯವರು ಬೇಜವಾಬ್ದಾರಿತನವನ್ನು ತೋರುತ್ತಿರುವುದು ಸ್ಪಷ್ಟವಾಗಿದೆ. ಇಂತಹ ಘಟನೆಗಳಿಗೆ ಶಾಲಾ ವಾಹನದಲ್ಲಿ ಆಸನಗಳಿದ್ದಷ್ಟು ಮಕ್ಕಳನ್ನು ಕೂಡಿಸದೇ ಮಿತಿಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಶಾಲಾ ವಾಹನದಲ್ಲಿ ತುಂಬುತ್ತಿರುವುದು, ವಾಹನಗಳಿಗೆ ಇನ್ಸುರೆನ್ಸ್ ಇಲ್ಲದಿರುವುದು ಕಾರಣ.
ಎಷ್ಟೋ ವಾಹನಗಳು ಸುಸ್ಥಿತಿಯಲ್ಲಿರುವುದಿಲ್ಲ. ಅಂತಹ ವಾಹನಗಳು ಕಂಡುಬಂದಲ್ಲಿ ಅವುಗಳನ್ನು ಸೀಜ್ ಮಾಡಬೇಕು. ಮಕ್ಕಳ ಹಿತದೃಷ್ಟಿಯಿಂದ ಪ್ರತಿಯೊಂದು ಖಾಸಗಿ ಶಾಲಾ ವಾಹನಗಳನ್ನು ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಶಾಲಾ ಆಡಳಿತ ಮಂಡಳಿಯವರ ಮೇಲೆಯೂ ಸಹ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಹುಬ್ಬಳ್ಳಿ, ಪವನ ಕುರಿ, ಎಂ.ಬಿ. ಹೆಸರೂರ, ಪ್ರಶಾಂತ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.



