ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಪಂದ್ಯದಲ್ಲಿ ಗೆಲ್ಲುವ ತಂಡ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ. ಪ್ರಸ್ತುತ ಅಂಕ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 12 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಆರ್ಸಿಬಿ ತಂಡ 12 ಪಾಯಿಂಟ್ಸ್ನೊಂದಿಗೆ ತೃತೀಯ ಸ್ಥಾನದಲ್ಲಿದೆ. ಉಭಯ ತಂಡಗಳ ನಡುವಣ ಈ ಪಂದ್ಯದಲ್ಲಿ ಗೆಲ್ಲುವ ತಂಡ 14 ಅಂಕಗಳೊಂದಿಗೆ ಗುಜರಾತ್ ಟೈಟಾನ್ಸ್ ತಂಡವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಲಿದೆ.
ಇಂದಿನ ಪಂದ್ಯದಲ್ಲಿ ಜಯಗಳಿಸುವ ತಂಡವು ತನ್ನ ಪ್ಲೇಆಫ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಲಿದೆ. ಏಕೆಂದರೆ ಈ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಒಟ್ಟು 14 ಅಂಕಗಳನ್ನು ಪಡೆಯಬಹುದು. ಅಲ್ಲದೆ ಮುಂದಿನ 4 ಮ್ಯಾಚ್ಗಳಲ್ಲಿ ಒಂದು ಜಯ ಸಾಧಿಸಿದರೆ 16 ಅಂಕಗಳೊಂದಿಗೆ ಪ್ಲೇಆಫ್ಗೆ ಪ್ರವೇಶಿಸಬಹುದು. ಹೀಗಾಗಿ ಇಂದಿನ ಮ್ಯಾಚ್ ಉಭಯ ತಂಡಗಳಿಗೆ ಮಹತ್ವದ ಪಂದ್ಯವಾಗಿ ಮಾರ್ಪಟ್ಟಿದೆ. ಇಂದಿನ ಪಂದ್ಯದಲ್ಲಿ ಆರ್ಸಿಬಿ ಪಾಲಿಗೆ ಗೆಲುವು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಕಳೆದ ಪಂದ್ಯದಲ್ಲಿ ರಾಯಲ್ ಪಡೆ ವಿರುದ್ಧ ಪಾರುಪತ್ಯ ಮೆರೆಯುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಶಸ್ವಿಯಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಡೆಲ್ಲಿ ಬಾಯ್ಸ್ ಕಡೆಯಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.