ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಬಿಗ್ ಫೈಟ್ ನಡೆಯಲಿದ್ದು, ಪಂದ್ಯ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಆದ್ರೆ ಪಂದ್ಯ ನಡೆಯುವ ಬಗ್ಗೆ ಇದೀಗ ಅನುಮಾನ ಶುರುವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಈ ಎರಡು ತಂಡಗಳು ಬಲಿಷ್ಠವಾಗಿದ್ದು ಪಂದ್ಯವೂ ರೋಚಕ ಕ್ಷಣಕ್ಕೆ ಕಾರಣವಾಗಬಹುದು. ಇದರ ನಡುವೆ ಆರ್ಸಿಬಿ- ಪಂಜಾಬ್ನ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿ ಆಗೋ ಆತಂಕವಿದೆ.
ರಜತ್ ಪಾಟಿದಾರ್ ನೇತೃತ್ವದ ಆರ್ಸಿಬಿ ತಂಡ ಈಗಾಗಲೇ 6 ಪಂದ್ಯಗಳನ್ನ ಆಡಿದ್ದು ಇದರಲ್ಲಿ 4 ಗೆಲುವು ಸಾಧಿಸಿ ತವರಲ್ಲಿ ನಡೆದ 2 ಪಂದ್ಯಗಳನ್ನು ಸೋತಿದೆ. ಇನ್ನೂ ಪಂಜಾಬ್ ಕೂಡ 6 ಪಂದ್ಯಗಳನ್ನು ಆಡಿದ್ದು 4 ಗೆಲುವು ಪಡೆದು ಎರಡರಲ್ಲಿ ಸೋಲುಂಡಿದೆ. ಹೀಗಾಗಿ ಪಾಯಿಂಟ್ ಟೇಬಲ್ನಲ್ಲಿ ಆರ್ಸಿಬಿ 3ನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಡಿಮೆ ರನ್ರೇಟ್ನಿಂದ 4ನೇ ಸ್ಥಾನದಲ್ಲಿದೆ.
ನಾಳೆ ಸಂಜೆ 7:30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪ್ರತಿಷ್ಠೆಯ ಪಂದ್ಯದ ಸಮಯದಲ್ಲಿ ಹವಾಮಾನ ಹೇಗಿದೆ ಎಂದರೆ ಮಳೆಯಿಂದ ಸ್ವಲ್ಪ ತೊಂದರೆ ಆಗುವ ಸಾಧ್ಯತೆ ಇದೆ. ಈ ಮಳೆ ಪಂದ್ಯದ ಆರಂಭದಲ್ಲಿ ಮಾತ್ರ ನಿರೀಕ್ಷೆ ಮಾಡಬಹುದು. ನಂತರ ಮಳೆ ನಿಂತು ಹೋಗುತ್ತದೆ. ಆದರೆ ಪಂದ್ಯ ಸುಗಮವಾಗಿ ನಡೆಯುತ್ತದೆ ಎನ್ನಲಾಗಿದೆ.


