ಟಾಟಾ ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದು ಬೀಗಿದೆ. ಈ ಮೂಲಕ 18 ವರ್ಷಗಳ ಕಾಯುವಿಕೆಗೆ ಅಂತ್ಯ ಸಿಕ್ಕಿದೆ. ಇನ್ನೂ ಪಂದ್ಯದಲ್ಲಿ ಎಲ್ಲರ ಚಿತ್ತಚೇಸ್ ಮಾಸ್ಟರ್ ಕೊಹ್ಲಿಯತ್ತ ನೆಟ್ಟಿತ್ತು. ಸತತ 18 ವರ್ಷಗಳ ಕಾಲ ಒಂದೇ ತಂಡದ ಪರವಾಗಿ ಆಡಿ ಅತೀ ಹೆಚ್ಚು ರನ್ ಗಳಿಕೆಯಲ್ಲಿ ನಂ.1 ಸ್ಥಾನದಲ್ಲಿರುವ ಕಿಂಗ್ ಕೊಹ್ಲಿಗೆ ಇದು ಅದೃಷ್ಟದ ವರ್ಷವಾಗಿದ್ದು, ಪ್ರಶಸ್ತಿ ಗೆದ್ದ ಖುಷಿಯಲ್ಲಿ ಕೊಹ್ಲಿ ಸಂಭ್ರಮ ಡಬಲ್ ಆಗಿತ್ತು.
ಮೊದಲಿಗೆ ಟಾಸ್ ಗೆದ್ದ ಪಂಜಾಬ್ ಮೊದಲು ಬೌಲಿಂಗ್ ಆಯ್ದುಕೊಂಡು ಬೆಂಗಳೂರಿಗೆ ಬ್ಯಾಟಿಂಗ್ ಗೆ ಆಹ್ವಾನಿಸಿತ್ತು. ಅದರಂತೆ ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ RCB, ಉತ್ತಮ ಆರಂಭ ಪಡೆಯಿತು. ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಅವರು ಉತ್ತಮ ಆರಂಭ ತಂದು ಕೊಟ್ಟರು. ಅದರಂತೆ ಉಳಿದ ಬ್ಯಾಟರ್ ಗಳೂ ಸ್ಥಿರ ಪ್ರದರ್ಶನ ನೀಡಿದ್ದರು. ಆದರ ಪ್ರತೀಕವಾಗಿ ಆರ್ ಸಿಬಿ ಪಂಜಾಬ್ ಕಿಂಗ್ಸ್ ಗೆ 191 ರನ್ ಗಳ ಗುರಿ ನೀಡಿತ್ತು.
ಈ ಗುರಿ ಬೆನ್ನಟ್ಟಿದ ಪಂಜಾಬ್ ಉತ್ತಮ ಆರಂಭ ಪಡೆದರೂ ಆ ಬಳಿಕ ಸತತ ವಿಕೆಟ್ ಕಳೆದುಕೊಂಡು ಪಂದ್ಯವನ್ನು ಕೈ ಚಲ್ಲಿತ್ತು. ಈ ಮೂಲಕ ಸತತ 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ IPL ಪ್ರಶಸ್ತಿಯನ್ನು ಗೆದ್ದು ಬೀಗಿದೆ.
ಗೆದ್ದ ಖುಷಿಯಲ್ಲಿ ವಿರಾಟ್ ಕೊಹ್ಲಿ ಕಣ್ಣೀರು ಹಾಕಿದ್ದು, ಎಲ್ಲರ ಹೃದಯ ಮುಟ್ಟಿತ್ತು. ಒಟ್ಟಾರೆ ತಂಡದ ಆಟಗಾರರು ಕುಣಿದು ಕುಪ್ಪಳಿಸಿದರು.
ಆರ್ ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಎಲ್ಲೆಡೆ ಅಭಿಮಾನಿಗಳ ಸಂಭ್ರಮ ಮುಗಿಲ ಮುಟ್ಟಿದೆ. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬೈಕ್, ತೆರೆದ ಕಾರಿನಲ್ಲಿ ಕೇಕೆ ಹಾಕುತ್ತಾ ಜೈ ಆರ್ ಸಿಬಿ ಎಂದು ಘೋಷಣೆ ಕೂಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.