ಭಾರೀ ಮಳೆಯ ಕಾರಣದಿಂದ ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಶನಿವಾರ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ IPL ಪಂದ್ಯ ರದ್ದಾಗಿದೆ. ಮಳೆಗೂ ಮುನ್ನ ಮೊದಲು ಟಾಸ್ ಗೆದ್ದ ಪಂಜಾಬ್, ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಶ್ರೇಯಸ್ ಪಡೆ ಕಷ್ಟಕರವಾಗಿದ್ದ ಪಿಚ್ನಲ್ಲಿ 201 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಇನಿಂಗ್ಸ್ ಆರಂಭಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ಒಂದು ಓವರ್ನಲ್ಲಿ 7 ರನ್ ಕಲೆಹಾಕಿತು. ಈ ವೇಳೆ ಸುರಿಯಾಲಾರಂಭಿಸಿದ ಮಳೆಗೆ ಇಡೀ ಪಂದ್ಯವನ್ನು ರದ್ದುಗೊಳಿಸಲಾಯಿತು. ಪಂದ್ಯ ರದ್ದಾದ ಕಾರಣ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ.
ಒಂದು ವೇಳೆ ಈ ಪಂದ್ಯವು ನಡೆದಿದ್ದರೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಿತ್ತು. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಕೆಕೆಆರ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ಬೃಹತ್ ಮೊತ್ತವನ್ನು ಚೇಸ್ ಮಾಡಿ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಮಳೆಯಿಂದಾಗಿ ಇದೀಗ ಪಂಜಾಬ್ ಪಡೆ ಒಂದು ಅಂಕವನ್ನು ಕಳೆದುಕೊಂಡಿದೆ. ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯ ರದ್ದಾಗಿದ್ದರಿಂದ ಯಾರಿಗೆ ಲಾಭ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು. ಏಕೆಂದರೆ ಇತ್ತ ಪಂಜಾಬ್ ಕಿಂಗ್ಸ್ ತಂಡವು 9 ಪಂದ್ಯಗಳಿಂದ 11 ಅಂಕಗಳನ್ನು ಕಲೆಹಾಕಿದರೆ, ಅತ್ತ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ 9 ಪಂದ್ಯಗಳಿಂದ 10 ಅಂಕಗಳನ್ನು ಗಳಿಸಿದೆ.
ಈ ಎರಡು ತಂಡಗಳಿಗೆ ಮುಂದಿನ ಪಂದ್ಯಗಳ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು ಹಿಂದಿಕ್ಕಲು ಉತ್ತಮ ಅವಕಾಶವಿದೆ. ಅಂದರೆ ಪ್ರಸ್ತುತ ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ 4ನೇ ಸ್ಥಾನದಲ್ಲಿದ್ದರೆ, ಮುಂಬೈ ಹಾಗೂ ಲಕ್ನೋ ಕ್ರಮವಾಗಿ 5ನೇ ಮತ್ತು 6ನೇ ಸ್ಥಾನಗಳಲ್ಲಿದೆ. ಇಲ್ಲಿ ಪಂಜಾಬ್ ಕಿಂಗ್ಸ್ ತಂಡದ ನೆಟ್ ರನ್ ರೇಟ್ +0.177 ಇದ್ದು, ಇದೇ ವೇಳೆ ಮುಂಬೈ ಇಂಡಿಯನ್ಸ್ ತಂಡದ ನೆಟ್ ರನ್ ರೇಟ್ +0.673 ಇದೆ. ಒಂದು ವೇಳೆ ಕೆಕೆಆರ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆದ್ದಿದ್ದರೆ ನೆಟ್ ರನ್ ರೇಟ್ ಉತ್ತಮಗೊಳ್ಳುತ್ತಿತ್ತು. ಆದರೆ ಇದೀಗ ಪಂಜಾಬ್ ಕಿಂಗ್ಸ್ ತಂಡವನ್ನು ಮುಂದಿನ ಪಂದ್ಯಗಳ ಮೂಲಕ ಹಿಂದಿಕ್ಕುವಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗೆ ಉತ್ತಮ ಅವಕಾಶವಿದೆ.