ಐಪಿಎಲ್ 2026 ರ ಟೂರ್ನಿ ಮಾರ್ಚ್ 28 ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಈ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7:30 ಕ್ಕೆ ನಡೆಯಲಿದೆ. ಆದರೆ ಪಂದ್ಯಕ್ಕೂ ಮುನ್ನವೇ ಆರ್ಸಿಬಿ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿ ಜೋಶ್ ಹೇಜಲ್ವುಡ್ ಅವರು ಫಿಟ್ನೆಸ್ ಸಮಸ್ಯೆಯಿಂದಾಗಿ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಕೋಚ್ ಆಂಡಿ ಫ್ಲವರ್ ತಿಳಿಸಿದ್ದಾರೆ.
ಗಾಯದ ನಡುವೆಯೂ ತಂಡವನ್ನು ಸೇರಿಕೊಂಡಿರುವ ಹೇಜಲ್ವುಡ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರನ್ನು ಮೊದಲ ಪಂದ್ಯದಿಂದ ಹೊರಗಿಡಲಾಗಿದೆ. ನವೆಂಬರ್ 2025 ರಿಂದ ಕ್ರಿಕೆಟ್ನಿಂದ ದೂರವಿರುವ ಅವರು ಮಂಡಿರಜ್ಜು ಮತ್ತು ಅಕಿಲೀಸ್ ಸ್ನಾಯು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಆರ್ಸಿಬಿ ತಂಡದ ಬೌಲಿಂಗ್ ವಿಭಾಗದಲ್ಲಿ ಹೇಜಲ್ವುಡ್ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವರ ಅನುಪಸ್ಥಿತಿ ತಂಡಕ್ಕೆ ಸವಾಲಾಗಬಹುದು. ಕಳೆದ ಆವೃತ್ತಿಯಲ್ಲಿ ಅವರು 12 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದು, 8.77 ಎಕಾನಮಿ ದರ ಹೊಂದಿದ್ದರು. ಇದೀಗ ಅವರ ಗೈರುಹಾಜರಿಯಲ್ಲಿ ಇತರ ವೇಗದ ಬೌಲರ್ಗಳ ಮೇಲೆ ಹೆಚ್ಚು ಹೊಣೆಗಾರಿಕೆ ಬೀಳಲಿದೆ.
ಇದರ ಮಧ್ಯೆ, ರಜತ್ ಪಾಟಿದಾರ್ ನೇತೃತ್ವದ ಆರ್ಸಿಬಿ ತಂಡ ತವರಿನಲ್ಲಿ ಗೆಲುವಿನೊಂದಿಗೆ ಟೂರ್ನಿ ಆರಂಭಿಸಲು ಸಜ್ಜಾಗಿದ್ದು, ಅಭಿಮಾನಿಗಳಲ್ಲಿ ಪಂದ್ಯಕ್ಕಾಗಿ ಹೆಚ್ಚಿನ ನಿರೀಕ್ಷೆ ಮೂಡಿದೆ. ಪಂದ್ಯ ಸಂಜೆ 7:30 ಕ್ಕೆ ಆರಂಭವಾಗಲಿದ್ದು, ಟಾಸ್ 7:00 ಗಂಟೆಗೆ ನಡೆಯಲಿದೆ.



