2026ರ ಟಿ20 ವಿಶ್ವಕಪ್ ಮುಕ್ತಾಯದ ಹಂತದಲ್ಲಿದ್ದು, ಮಾರ್ಚ್ 8ರಂದು ಫೈನಲ್ ಪಂದ್ಯ ನಡೆಯಲಿದೆ.
ವಿಶ್ವಕಪ್ ಅಂತ್ಯಗೊಂಡ ತಕ್ಷಣವೇ ದೇಶದ ಜನಪ್ರಿಯ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ 19ನೇ ಆವೃತ್ತಿಗೆ ಚಾಲನೆ ಸಿಗಲಿದೆ. 2026ರ ಐಪಿಎಲ್ ಪೂರ್ಣ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಆದರೆ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಪಂದ್ಯಾವಳಿ ಆರಂಭವಾಗುವುದು ಖಚಿತವಾಗಿದೆ.
ಮೊದಲಿಗೆ ಮಾರ್ಚ್ 26ರಿಂದ ಐಪಿಎಲ್ ಆರಂಭವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮಾರ್ಚ್ 28ರಿಂದ ಟೂರ್ನಿ ಆರಂಭಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಆರಂಭದ ದಿನಾಂಕದಲ್ಲಿ ಬದಲಾವಣೆ ಇದ್ದರೂ, ಫೈನಲ್ ಪಂದ್ಯ ಮಾತ್ರ ಮೇ 31ರಂದು ನಡೆಯಲಿದೆ. ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಐಪಿಎಲ್ ಆಡಳಿತ ಮಂಡಳಿ ಮುಂದಿನ ವಾರ ಸಭೆ ನಡೆಸಿ ವೇಳಾಪಟ್ಟಿಗೆ ಅಧಿಕೃತ ಅನುಮೋದನೆ ನೀಡಲಿದೆ ಎನ್ನಲಾಗಿದೆ.
ಐಪಿಎಲ್ ವೇಳಾಪಟ್ಟಿ ಪ್ರಕಟಣೆಯಲ್ಲಿ ವಿಳಂಬವಾಗಲು ನಾಲ್ಕು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಪ್ರಮುಖ ಕಾರಣವಾಗಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇರಳದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ದಿನಾಂಕ ಪ್ರಕಟಣೆಗೆ ಬಿಸಿಸಿಐ ಕಾಯುತ್ತಿದೆ. ಈ ಕಾರಣದಿಂದಲೇ 2026ರ ಐಪಿಎಲ್ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ.
ಇನ್ನು ಪಂದ್ಯಾವಳಿಯ ಮೊದಲ ಪಂದ್ಯ ಎಲ್ಲಿ ನಡೆಯಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಹಿಂದಿನ ಆವೃತ್ತಿಯ ಚಾಂಪಿಯನ್ ತಂಡದ ತವರು ಮೈದಾನದಲ್ಲೇ ಉದ್ಘಾಟನಾ ಪಂದ್ಯ ನಡೆಯುತ್ತದೆ. ಆದರೆ ಕಳೆದ ಆವೃತ್ತಿಯ ಚಾಂಪಿಯನ್ ತಂಡದ ತವರು ಮೈದಾನದಲ್ಲಿ ಉಂಟಾದ ಅವಘಡದ ಹಿನ್ನೆಲೆ, ಅಲ್ಲಿ ಪಂದ್ಯ ನಡೆಯುವ ಕುರಿತು ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿಲ್ಲ.



