ಬೆಂಗಳೂರು: ನಿವೃತ್ತ ಐಪಿಎಸ್ ಓಂ ಪ್ರಕಾಶ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ. ಇದೀಗ ಪುತ್ರ ಕಾರ್ತೀಕೇಶ್ ನೀಡಿದ ದೂರಿನ ಮೇರೆಗೆ ತಾಯಿ ಪಲ್ಲವಿ, ಸಹೋದರಿ ಕೃತಿ ವಿರುದ್ಧ ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 103(ಕೊಲೆ) 3(ಒಂದೇ ಉದ್ದೇಶಕ್ಕಾಗಿ ಒಟ್ಟಾಗಿ ಎಸಗಿದ ಅಪರಾಧ) ಅಡಿ ಪ್ರಕರಣ ದಾಖಲಾಗಿದೆ. ಎಫ್ಐಆರ್ ದಾಖಲಾದ ಬೆನ್ನಲ್ಲೇ ಪತ್ನಿ ಪಲ್ಲವಿ ಮತ್ತು ಕೃತಿಯನ್ನು ಪೊಲೀಸರು ಬಂಧಿಸಿದ್ದಾರೆ.
ದೂರಿನಲ್ಲಿ ಏನಿದೆ?
ಕಳೆದ ಒಂದು ವಾರದಿಂದ ತಾಯಿ ಪಲ್ಲವಿ ಕೊಲೆ ಬೆದರಿಕೆ ಹಾಕುತ್ತಿದ್ದರು. ಕೊಲೆ ಬೆದರಿಕೆ ಹಾಕುತ್ತಿದ್ದರಿಂದ ಅವರ ಸಹೋದರಿ ಸರಿತಾ ಮನೆಗೆ ತಂದೆ ಹೋಗಿದ್ದರು. ಎರಡು ದಿನಗಳ ಹಿಂದೆ ಕೃತಿ ಸರಿತಾ ಅವರ ಮನೆಗ ಹೋಗಿ ಪೀಡಿಸಿ ಕರೆ ತಂದಿದ್ದಳು.
ಏ.20ರ ಸಂಜೆ 5 ಗಂಟೆಯ ವೇಳೆ ನಾನು ದೊಮ್ಮಲೂರಿನಲ್ಲಿರುವ ಗಾಲ್ಫ್ ಅಸೋಸಿಯೇಷನ್ನಲ್ಲಿ ಇದ್ದಾಗ ನಮ್ಮ ಮನೆಯೆ ಪಕ್ಕದ ಮನೆಯವರು ಕರೆ ಮಾಡಿ ನಿಮ್ಮ ತಂದೆಯ ದೇಹ ಕೆಳಗಡೆ ಬಿದ್ದಿರುತ್ತದೆ ಎಂದು ತಿಳಿಸಿದರು.
ಕೂಡಲೇ ದೊಮ್ಮಲೂರಿನಿಂದ ಹೊರಟು ಸಂಜೆ 5:45ಕ್ಕೆ ಮನೆಗೆ ಆಗಮಿಸಿದೆ. ಈ ವೇಳೆ ಸ್ಥಳದಲ್ಲಿ ಪೊಲೀಸರು ಮತ್ತು ಸಾರ್ವಜನಿಕರು ಇದ್ದರು. ತಂದೆಯ ತಲೆಯಿಂದ ರಕ್ತ ಬರುತ್ತಿತ್ತು. ದೇಹದ ಪಕ್ಕದಲ್ಲಿ ಬಾಟಲ್ ಮತ್ತು ಚಾಕು ಇತ್ತು.
ನನ್ನ ತಾಯಿ ಪಲ್ಲವಿ ಮತ್ತು ತಂಗಿ ಕೃತಿ ಖಿನ್ನತೆಯಿಂದ ಬಳಲುತ್ತಿದ್ದು ಅವರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ, ಎ1 ಪಲ್ಲವಿ ಮತ್ತು ಎ2 ಕೃತಿ ಮೇಲೆ ಕೊಲೆ ಶಂಕೆಯ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಬಿಎನ್ ಎಸ್ 103(1)3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.