ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 5 ದಿನಗಳ ಕದನ ವಿರಾಮ ಘೋಷಿಸಿದ್ದಾರೆ. ಹಾರ್ಮುಜ್ ಜಲಸಂಧಿ ವಿಷಯವಾಗಿ ಅಮೆರಿಕ ಮತ್ತು ಇರಾನ್ ನಡುವೆ ತೀವ್ರ ಉದ್ವಿಗ್ನತೆ ಉಂಟಾಗಿದ್ದ ನಡುವೆಯೇ ಈ ನಿರ್ಧಾರ ಹೊರಬಂದಿದೆ.
ಇದಕ್ಕೂ ಮೊದಲು, 48 ಗಂಟೆಗಳೊಳಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಡೆಡ್ಲೈನ್ ಒಳಗೆ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಪ್ರಮಾಣದ ಯುದ್ಧ ಸಂಭವಿಸುವ ಸಾಧ್ಯತೆ ಇದೆ ಎಂಬ ಆತಂಕವೂ ವ್ಯಕ್ತವಾಗಿತ್ತು.
ಇರಾನ್ ಈ ಬೆದರಿಕೆಗೆ ಮಣಿಯದ ಹಿನ್ನೆಲೆ ಭಾರಿ ದಾಳಿ ನಡೆಯಬಹುದು ಎಂದು ನಿರೀಕ್ಷಿಸಲಾಗುತ್ತಿದ್ದ ಸಮಯದಲ್ಲೇ ಟ್ರಂಪ್ 5 ದಿನಗಳ ಕದನ ವಿರಾಮ ಘೋಷಿಸಿದ್ದು ಅಚ್ಚರಿ ಮೂಡಿಸಿದೆ.
ಈ ಬೆಳವಣಿಗೆಗಳಿಂದ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ತಾತ್ಕಾಲಿಕವಾಗಿ ತಗ್ಗುವ ನಿರೀಕ್ಷೆ ಇದ್ದರೂ, ಮುಂದಿನ ಬೆಳವಣಿಗೆಗಳ ಮೇಲೆ ಜಾಗತಿಕ ಗಮನ ಕೇಂದ್ರೀಕೃತವಾಗಿದೆ.



