ನವದೆಹಲಿ: ಅಮೆರಿಕದ ದಾಳಿಯ ನಂತರ ಹಿಂದೂ ಮಹಾಸಾಗರದಲ್ಲಿ ಮುಳುಗಿದ ಇರಾನ್ ದೇಶದ ಯುದ್ಧ ನೌಕೆಯಲ್ಲಿದ್ದ ಸಿಬ್ಬಂದಿಗೆ ನೆರವು ಒದಗಿಸಲು ಭಾರತೀಯ ನೌಕಾಪಡೆ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.
ಅಮೆರಿಕದ ಜಲಾಂತರ್ಗಾಮಿ ನೌಕೆಯಿಂದ ನಡೆದ ಟಾರ್ಪಿಡೊ ದಾಳಿಯಿಂದ ಇರಾನ್ ದೇಶದ ‘ಐರಿಸ್ ದೇನಾ’ ಎಂಬ ಯುದ್ಧ ನೌಕೆ ಸಂಕಷ್ಟಕ್ಕೀಡಾಗಿ ಮುಳುಗಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಮಾರ್ಚ್ 4ರ ಮುಂಜಾನೆ ಕೊಲಂಬೊದಲ್ಲಿರುವ ಸಾಗರ ರಕ್ಷಣಾ ಸಮನ್ವಯ ಕೇಂದ್ರಕ್ಕೆ ಐರಿಸ್ ದೇನಾ ನೌಕೆಯಿಂದ ಸಂಕಷ್ಟ ಸಂದೇಶ ಬಂದಿದ್ದು, ಆ ನೌಕೆ ಶ್ರೀಲಂಕಾದ ಗ್ಯಾಲೆ ನಗರದಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು 20 ಸಮುದ್ರ ಮೈಲು ದೂರದಲ್ಲಿದ್ದ ಪ್ರದೇಶದಲ್ಲಿ ಮುಳುಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಪ್ರದೇಶವು ಶ್ರೀಲಂಕಾದ ಜವಾಬ್ದಾರಿಯಲ್ಲಿರುವ ಶೋಧ ಮತ್ತು ರಕ್ಷಣಾ ವ್ಯಾಪ್ತಿಗೆ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿ ದೊರಕುತ್ತಿದ್ದಂತೆಯೇ ಭಾರತೀಯ ನೌಕಾಪಡೆ ತಕ್ಷಣ ಕಾರ್ಯಚಟುವಟಿಕೆ ಆರಂಭಿಸಿತು. ಶ್ರೀಲಂಕಾ ನೌಕಾಪಡೆ ಮುನ್ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ ಬೆಂಬಲ ನೀಡುವ ಉದ್ದೇಶದಿಂದ ದೀರ್ಘ ದೂರದ ಕಡಲ ಗಸ್ತು ವಿಮಾನವನ್ನು ಬೆಳಿಗ್ಗೆ ನಿಯೋಜಿಸಲಾಯಿತು. ಅಗತ್ಯವಿದ್ದಲ್ಲಿ ಗಾಳಿಯಿಂದ ರಕ್ಷಣಾ ದೋಣಿಗಳನ್ನು ಕೆಳಗೆ ಬಿಡಲು ಸಿದ್ಧವಾಗಿದ್ದ ಮತ್ತೊಂದು ವಿಮಾನವನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಇದೇ ವೇಳೆ ಸಮೀಪ ಪ್ರದೇಶದಲ್ಲಿ ತರಬೇತಿ ಕಾರ್ಯದಲ್ಲಿ ತೊಡಗಿದ್ದ ಭಾರತೀಯ ನೌಕಾಪಡೆಯ ತರಬೇತಿ ಹಡಗು ‘ಐಎನ್‌ಎಸ್ ತರಂಗಿಣಿ’ಗೆ ಕೂಡ ಶೋಧ ಕಾರ್ಯದಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದ್ದು, ಅದು ಸಂಜೆ ವೇಳೆಗೆ ಘಟನಾ ಸ್ಥಳದ ಸಮೀಪ ತಲುಪಿತು. ಆಗಾಗಲೇ ಶ್ರೀಲಂಕಾ ನೌಕಾಪಡೆ ಮತ್ತು ಇತರ ಸಂಬಂಧಿತ ಸಂಸ್ಥೆಗಳು ಶೋಧ ಹಾಗೂ ರಕ್ಷಣಾ ಕಾರ್ಯವನ್ನು ಆರಂಭಿಸಿತ್ತು.
ಇನ್ನೂ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಮೀಕ್ಷಾ ಹಡಗು ‘ಐಎನ್‌ಎಸ್ ಇಕ್ಷಾಕ್’ ಅನ್ನು ಕೊಚ್ಚಿ ಬಂದರಿನಿಂದ ಕಳುಹಿಸಲಾಗಿದೆ. ಮುಳುಗಿದ ನೌಕೆಯಲ್ಲಿದ್ದ ಸಿಬ್ಬಂದಿಯ ಪತ್ತೆಗಾಗಿ ಸಮುದ್ರದಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ಮಾರ್ಚ್ 4ರಂದು ಶ್ರೀಲಂಕಾದ ದಕ್ಷಿಣ ಕರಾವಳಿಯ ಗ್ಯಾಲೆ ನಗರದಿಂದ ಸುಮಾರು 40 ಸಮುದ್ರ ಮೈಲು ದೂರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯೊಂದು ಇರಾನ್ ದೇಶದ ಐರಿಸ್ ದೇನಾ ಯುದ್ಧ ನೌಕೆಯ ಮೇಲೆ ದಾಳಿ ನಡೆಸಿದ್ದು, ಅದರ ಪರಿಣಾಮವಾಗಿ ನೌಕೆ ಮುಳುಗಿದ ಘಟನೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಮತ್ತು ಶ್ರೀಲಂಕಾ ನೌಕಾಪಡೆಗಳ ನಡುವೆ ಸಮನ್ವಯದಿಂದ ಶೋಧ ಹಾಗೂ ರಕ್ಷಣಾ ಕಾರ್ಯ ಮುಂದುವರಿಯುತ್ತಿದೆ ಎಂದು ತಿಳಿದುಬಂದಿದೆ.



