ನೀರಾವರಿ ಸಚಿವರುಗಳ ಸಭೆ; ಮೇಕೆದಾಟು, ಮಹದಾಯಿ, ನವಲಿ ಹಾಗೂ ಅಣೆಕಟ್ಟು ದುರಸ್ತಿ ಯೋಜನೆಗಳ ಬಗ್ಗೆ ಚರ್ಚೆ: ಡಿ.ಕೆ. ಶಿವಕುಮಾರ್

0
Spread the love

ಬೆಂಗಳೂರು, ಫೆ.18″ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ದೇಶದ ಎಲ್ಲಾ ನೀರಾವರಿ ಸಚಿವರುಗಳ ಸಭೆಯಲ್ಲಿ ಮೇಕೆದಾಟು, ಮಹದಾಯಿ, ನವಲಿ ಹಾಗೂ ಅಣೆಕಟ್ಟು ದುರಸ್ತಿ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

Advertisement

ರಾಜಸ್ಥಾನಕ್ಕೆ ಪ್ರಯಾಣ ಬೆಳೆಸುವ ಮುನ್ನ ನೀರಾವರಿ ಸಚಿವರೂ ಆದ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಂಗಳವಾರ ಬೆಳಗಿನ ಜಾವ ಈ ಬಗ್ಗೆ ಮಾಹಿತಿ ನೀಡಿದರು.

“ರಾಜಸ್ಥಾನದಲ್ಲಿ ಅಖಿಲ ಭಾರತ ನೀರಾವರಿ ಸಚಿವರುಗಳ ಸಮ್ಮೇಳನ ನಡೆಯುತ್ತಿದ್ದು, ಇಲ್ಲಿ ಎಲ್ಲಾ ರಾಜ್ಯಗಳ ನೀರಾವರಿ ಸಚಿವರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ನಮ್ಮ ರಾಜ್ಯಕ್ಕೆ ನೀರಾವರಿ ವಿಚಾರದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಪ್ರಸ್ತಾಪ ಮಾಡುತ್ತೇನೆ” ಎಂದು ತಿಳಿಸಿದರು.

“ಮೇಕೆದಾಟು, ಮಹದಾಯಿ ಯೋಜನೆ ಅನುಮತಿ, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಆಗಿರುವ ಅನ್ಯಾಯಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಇದರ ಜತೆಗೆ ಈ ವರ್ಷ ನಾವು ಅನೇಕ ಇತರೆ ನೀರಾವರಿ ಯೋಜನೆಗಳನ್ನು ತಯಾರು ಮಾಡಿ ಕೇಂದ್ರಕ್ಕೆ ಕಳುಹಿಸಿದ್ದೇವೆ” ಎಂದು ಹೇಳಿದರು.

“ತುಂಗ ಭದ್ರಾ ಅಣೆಕಟ್ಟು ಕ್ರೆಸ್ಟ್ ಗೇಟ್ ದುರಸ್ತಿ ಬಳಿಕ ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆಗಾಗಿ ಅವುಗಳ ರಿಪೇರಿಗೆ ಯೋಜನೆಯನ್ನು ಸಿದ್ಧಪಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇನ್ನು ಈ ಜಲಾಶಯಕ್ಕೆ ನವಲಿಯಲ್ಲಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುವ ವಿಚಾರವಾಗಿ ತೆಲಂಗಾಣ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ಸಚಿವರ ಜೊತೆ ಚರ್ಚೆ ಮಾಡಲಾಗುವುದು. ಈ ವಿಚಾರವಾಗಿ ಪ್ರತ್ಯೇಕ ಸಭೆ ಮಾಡಲು ಈಗಾಗಲೇ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ” ಎಂದರು.

ಜನರಿಗೆ ಸರ್ಕಾರದ ಮೇಲೆ ನಂಬಿಕೆ ಇದೆ

ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ತಲುಪಿಲ್ಲ, ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ಇದೆಲ್ಲವೂ ಸುಳ್ಳು, ಸರ್ಕಾರಕ್ಕೆ ಸಂಪನ್ಮೂಲ ಕ್ರೂಢೀಕರಣ ಒಂದೇ ದಿನಕ್ಕೆ ಆಗುವುದಿಲ್ಲ. ಹಂತ ಹಂತವಾಗಿ ಬರುತ್ತದೆ. ಆರ್ಥಿಕ ವರ್ಷಾಂತ್ಯದ ವೇಳೆಗೆ ಎಲ್ಲವೂ ಸರಿಯಾಗುತ್ತದೆ. ಸರ್ಕಾರಕ್ಕೆ ಹಣದ ಸಮಸ್ಯೆ ಇಲ್ಲ.

ಆರ್ಥಿಕವಾಗಿ ನಾವು ಬಲಿಷ್ಠವಾಗಿದ್ದೇವೆ. ಅನ್ನಭಾಗ್ಯದಲ್ಲಿ ಜನರಿಗೆ ತಲುಪಬೇಕಾದ ಅಕ್ಕಿ ತಲುಪುತ್ತಿದೆ. ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳ ಹೊರತಾಗಿ, ಈ ವಿಚಾರದಲ್ಲಿ ಜನಸಾಮಾನ್ಯರಿಗೆ ಅಸಮಾಧಾನ ಇಲ್ಲ. ಜನರು ಈ ವಿಚಾರದಲ್ಲಿ ಸಂತೋಷವಾಗಿದ್ದಾರೆ. ಜನರಿಗೆ ನಮ್ಮ ಮೇಲೆ ನಂಬಿಕೆ ಇದೆ. ಎರಡು, ಮೂರು ತಿಂಗಳು ಹಣ ಬಾಕಿ ಇದ್ದು, ಈ ತಿಂಗಳು ಬಿಡುಗಡೆಯಾಗಲಿದೆ” ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here