ನವದೆಹಲಿ: ನಿರ್ಮಾಣ ಹಾಗೂ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಲ್ಲಿ ಕಂಡುಬರುತ್ತಿರುವ ಕಳಪೆ ಗುಣಮಟ್ಟದ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಈಗ ನಾಲ್ಕನೇ ವ್ಯಕ್ತಿಗಳಿಂದ ಆಡಿಟ್ ಮೊರೆ ಹೋಗಬೇಕೆ ಎಂದು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಹಾಗೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಪ್ರಶ್ನಿಸಿದ ಪ್ರಧಾನಿ, ಸಾಮಾನ್ಯವಾಗಿ ಯೋಜನೆಗಳ ಗುಣಮಟ್ಟ ಪರಿಶೀಲನೆಗೆ ‘ಥರ್ಡ್ ಪಾರ್ಟಿ’ ಆಡಿಟ್ ವ್ಯವಸ್ಥೆ ಚಾಲ್ತಿಯಲ್ಲಿದ್ದರೂ ಅದು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಂಗಳವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೋದಿ, ಕಾಮಗಾರಿಗಳಲ್ಲಿ ಗುಣಮಟ್ಟದ ಕೊರತೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಸಭೆಯಲ್ಲಿ ರೈಲ್ವೆ, ರಸ್ತೆ ಮತ್ತು ವಿದ್ಯುತ್ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 9 ರಾಜ್ಯಗಳಲ್ಲಿ ನಡೆಯುತ್ತಿರುವ ಸುಮಾರು 30,000 ಕೋಟಿ ರೂ. ವೆಚ್ಚದ ಆರು ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪ್ರಧಾನಿ ಪರಿಶೀಲಿಸಿದರು. ಮೂಲಸೌಕರ್ಯ ಕಾಮಗಾರಿಗಳನ್ನು ಬಿಡಿಭಾಗಗಳಾಗಿ ನೋಡದೆ ಸಮಗ್ರ ದೃಷ್ಟಿಕೋನದಿಂದ ಮೇಲ್ವಿಚಾರಣೆ ನಡೆಸಬೇಕು ಎಂದೂ, ತ್ವರಿತ ಅನುಷ್ಠಾನದ ಜೊತೆಗೆ ರಾಜಿ ಮಾಡಿಕೊಳ್ಳದೆ ಗುಣಮಟ್ಟವೂ ಇರಬೇಕು ಎಂದೂ ಅವರು ತಿಳಿಸಿದರು. ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಅನುಷ್ಠಾನ ಸಂಸ್ಥೆಗಳು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಪ್ರತಿ ಹಂತದಲ್ಲೂ ಗುಣಮಟ್ಟದ ಮೇಲ್ವಿಚಾರಣೆ ಬಲಪಡಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.
ವಿದ್ಯುತ್ ಉತ್ಪಾದನೆ ಹೆಚ್ಚಿಸಿದರೆ ಮಾತ್ರ ಸಾಲದು, ಸರಿಯಾದ ಪ್ರಸರಣ ಮಾರ್ಗಗಳೂ ಇರಬೇಕು ಎಂದ ಮೋದಿ, ಇದು ಕಾಲುವೆಗಳನ್ನು ನಿರ್ಮಿಸದೆ ಅಣೆಕಟ್ಟು ಕಟ್ಟಿದಂತೆ ಯಾವುದೇ ಪ್ರಯೋಜನ ನೀಡುವುದಿಲ್ಲ ಎಂದು ವಿದ್ಯುತ್ ಯೋಜನೆಗಳ ಪರಿಶೀಲನೆ ವೇಳೆ ಹೇಳಿದರು.
ಹೆಚ್ಚುತ್ತಿರುವ ಸೈಬರ್ ವಂಚನೆ ಮತ್ತು ಡಿಜಿಟಲ್ ಅರೆಸ್ಟ್ ಪ್ರಕರಣಗಳ ಕುರಿತು ಚರ್ಚಿಸಿದ ಪ್ರಧಾನಿ, ತರಬೇತಿ, ಜಾಗೃತಿ ಮತ್ತು ಶಿಕ್ಷಣದ ಮೂಲಕ ಇವುಗಳ ತಡೆಗಟ್ಟುವಿಕೆ ಬಲಪಡಿಸಬೇಕು ಎಂದರು. ಹಿರಿಯ ನಾಗರಿಕರು, ಯುವಕರು ಸೇರಿದಂತೆ ದುರ್ಬಲ ವರ್ಗದವರನ್ನು ಗುರಿಯಾಗಿಸಿಕೊಂಡು ನಡೆಯುವ ಸೈಬರ್ ಅಪರಾಧಗಳ ಎಚ್ಚರಿಕೆ ಚಿಹ್ನೆಗಳು ಮತ್ತು ಸುರಕ್ಷಿತ ಡಿಜಿಟಲ್ ಪದ್ಧತಿಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸಲು ಸೂಚಿಸಿದರು. ಈ ಸಭೆಯಲ್ಲಿ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಸೈಬರ್ ಅಪರಾಧ ನಿಯಂತ್ರಣಕ್ಕೆ 20 ರಾಜ್ಯಗಳು ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು.



