ಬೆಂಗಳೂರು: ಜೈನರು ಸಿಖ್ಖರು ಬೌದ್ಧರಿಂದ ಯಾರಿಗಾದರೂ ತೊಂದರೆ ಆಗಿದೆಯಾ? ಎಂದು ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ. ನಗರದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದದ ಬಗ್ಗೆ ಮಾತನಾಡಿದ ಅವರು, ಜೈನರು ಸಿಖ್ಖರು ಬೌದ್ಧರಿಂದ ಯಾರಿಗಾದರೂ ತೊಂದರೆ ಆಗಿದೆಯಾ? ಇಲ್ಲವಲ್ಲ, ಹಾಗೆಯೇ ಲಿಂಗಾಯತ ಪ್ರತ್ಯೇಕ ಧರ್ಮ. ಈ ಬಾರಿ ಸಿದ್ದರಾಮಯ್ಯ ತಲೆಗೆ ಕಟ್ಟುವುದಕ್ಕೆ ಆಗುವುದಿಲ್ಲ.
ಹಿಂದೆ ಆಟ ಆಡಿದ ಹಾಗೆ ಈಗ ಆಟ ಆಡಲು ಆಗುವುದಿಲ್ಲ. ಭಾನುವಾರ ಹೇಳಿದ್ದೇವೆ, ಭೌಗೋಳಿಕವಾಗಿ ನಾವೆಲ್ಲ ಭಾರತೀಯರು, ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳು. ಆದರೆ ಇದು ಬಸವ ಧರ್ಮ, ಇಂಡಿಕ್ ರಿಲಿಜಿಯನ್ ಇದರಲ್ಲಿ ಪ್ರಶ್ನೆ ಏನಿದೆ?ಹೋದ ಸಲ ಸಿದ್ದರಾಮಯ್ಯ ತಲೆಗೆ ಕಟ್ಟಿದರು. ಆದರೆ ಈ ಸಲ ಯಾರ ಆಟಗಳೂ ನಡೆಯುವುದಿಲ್ಲ ಎಂದರು.
ನಾವು ಪಾಸಿಟಿವ್ ಆಗಿ ಹೋಗೋಣ. ನಾವು ಲಿಂಗಾಯತ ಧರ್ಮದವರು, ಚತುರ್ವರ್ಣದಿಂದ ಹೊರಗೆ ಉಳಿದಿದ್ದೇವೆ. ಭಾನುವಾರ ಕಾರ್ಯಕ್ರಮ ನಡೆದಿದ್ದು ಮಠಾಧಿಪತಿಗಳ ಒಕ್ಕೂಟದಿಂದ. ಯಾರಿಗೆ ದ್ವಂದ್ವ ನಿಲುವು ಇದೆ, ಅವರನ್ನು ಕರೆಸಿಲ್ಲ. ನೇರವಾಗಿ ಇರುವವರನ್ನು ಕರೆದಿದ್ದಾರೆ. ವೀರಶೈವ ಮಹಾಸಭಾ ಕೂಡ ಒಂದು ಹಂತಕ್ಕೆ ಹತ್ತಿರ ಬಂದಿದೆ. ಅವರೂ ನಮ್ಮೊಂದಿಗೆ ಅರ್ಧ ದಾರಿಗೆ ಬಂದಿದ್ದಾರೆ ಎಂದರು.



