ಬಳ್ಳಾರಿ: ಬ್ಯಾನರ್ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ಪ್ರಕರಣದಲ್ಲಿ ರಾಜಕೀಯ ಹಿಂಸಾಚಾರದ ಮತ್ತೊಂದು ಮುಖ ಬಹಿರಂಗವಾಗಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಆವರಣದಲ್ಲಿ 50ಕ್ಕೂ ಹೆಚ್ಚು ದೊಣ್ಣೆಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.
ಗಲಾಟೆಯ ವೇಳೆ ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬಂದಿದ್ದವು. ಇದೀಗ ರೆಡ್ಡಿ ಮನೆ ಆವರಣದಲ್ಲೇ ದೊಣ್ಣೆಗಳ ರಾಶಿ ಪತ್ತೆಯಾಗಿರುವುದು, ಹಲ್ಲೆಗೆ ಪೂರ್ವಸಿದ್ಧತೆ ನಡೆದಿತ್ತೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಘಟನೆಯಲ್ಲಿ ಭರತ್ ರೆಡ್ಡಿ ಬೆಂಬಲಿಗರು ಮಾತ್ರವಲ್ಲದೆ, ಜನಾರ್ದನ ರೆಡ್ಡಿ ಪರ ಬೆಂಬಲಿಗರಿಂದಲೂ ಹಲ್ಲೆ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಕಾಂಗ್ರೆಸ್ ಕಾರ್ಯಕರ್ತರು ಕಲ್ಲೆಸೆದರೆ, ಬಿಜೆಪಿ ಬೆಂಬಲಿಗರು ದೊಣ್ಣೆ ಹಿಡಿದು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ.
ಪತ್ತೆಯಾದ ದೊಣ್ಣೆಗಳ ಮೂಲ, ಬಳಕೆಯ ಉದ್ದೇಶ ಹಾಗೂ ಯಾರ ನಿರ್ದೇಶನದ ಮೇರೆಗೆ ಅವುಗಳನ್ನು ಸಂಗ್ರಹಿಸಲಾಗಿತ್ತು ಎಂಬುದರ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮತ್ತಷ್ಟು ಸದ್ದು ಮಾಡುವ ಸಾಧ್ಯತೆ ಇದೆ.



