HomeArt and Literatureನಿಗಮ ಮಂಡಳಿ ಕುರ್ಚಿ ಸಚಿವ ಕನಸಿಗೆ ಶಾಂತಿಯ ಮದ್ದೇ, ರಾಜಕೀಯ ಸಮಾಧಾನವೇ?!

ನಿಗಮ ಮಂಡಳಿ ಕುರ್ಚಿ ಸಚಿವ ಕನಸಿಗೆ ಶಾಂತಿಯ ಮದ್ದೇ, ರಾಜಕೀಯ ಸಮಾಧಾನವೇ?!

For Dai;y Updates Join Our whatsapp Group

Spread the love

ರೋಣ ಶಾಸಕ ಜಿ.ಎಸ್. ಪಾಟೀಲರಿಗೆ ಮತ್ತೊಮ್ಮೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ ಸರ್ಕಾರದ ನಿರ್ಧಾರ ಗದಗ ಜಿಲ್ಲೆಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಕೆಲವರಿಗೆ ಇದು ಗೌರವದ ಹುದ್ದೆ ಎಂದು ಕಾಣಿಸಿದರೂ, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಇದು ಸ್ಪಷ್ಟ ಸಂದೇಶವಾಗಿದೆ. ಸಚಿವ ಸ್ಥಾನಕ್ಕೆ ಬಾಗಿಲು ಮುಚ್ಚಿದಂತಾಗಿದೆ ಎಂಬ ಅಸಮಾಧಾನ, ತಿಂಗಳುಗಟ್ಟಲೆ ನಡೆದ ಹೋರಾಟ, ಮನವಿ, ಪ್ರತಿಭಟನೆಗಳ ನಡುವೆಯೇ ಬಂದ ಈ ನೇಮಕ ರಾಜಕೀಯ ಸಮಾಧಾನಕ್ಕೆ ನೀಡಿದ ಮದ್ದೇ ಹೊರತು ನಿಜವಾದ ಉತ್ತರವಲ್ಲ ಎಂಬ ಮಾತು ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ.

ಹೋರಾಟದ ಉರಿ: ರೋಣ ಮತಕ್ಷೇತ್ರದಲ್ಲಿ ನಡೆದ ಪ್ರತಿಭಟನೆಗಳು ಸಾಮಾನ್ಯ ರಾಜಕೀಯ ಪ್ರದರ್ಶನಗಳಾಗಿರಲಿಲ್ಲ. ಗಜೇಂದ್ರಗಡ ಪಟ್ಟಣದಲ್ಲಿ ಕಾರ್ಯಕರ್ತನೊಬ್ಬ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಾರ್ಯಕರ್ತರ ನೋವನ್ನು ತೀವ್ರವಾಗಿ ತೋರಿಸಿತು. ರೋಣ ನಗರದಲ್ಲಿ ನಡೆದ ರ‍್ಯಾಲಿಗಳಲ್ಲಿ ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದ ಘಟನೆಗಳು ಪಕ್ಷದೊಳಗಿನ ಬೇಸರದ ಪ್ರತಿಬಿಂಬವಾಗಿದ್ದವು. ಸ್ಥಳೀಯ ಸಂಸ್ಥೆಗಳ ಕೆಲ ಜನಪ್ರತಿನಿಧಿಗಳು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದು ಕಾರ್ಯಕರ್ತರ ನಿರಾಶೆ ಎಷ್ಟರ ಮಟ್ಟಿಗೆ ತಲುಪಿತ್ತು ಎಂಬುದನ್ನು ತೋರಿಸಿತು. ಇಷ್ಟೆಲ್ಲ ಹೋರಾಟದ ಬಳಿಕವೂ ಸಚಿವ ಸ್ಥಾನ ಸಿಗದೆ ನಿಗಮ ಮಂಡಳಿ ಹುದ್ದೆ ನೀಡಿರುವುದು ಕಾರ್ಯಕರ್ತರ ಹೃದಯಕ್ಕೆ ನೀಡಿದ ಹೊಡೆತವಾಗಿದೆ.

ಅವಕಾಶ ಕೈತಪ್ಪಿದೇಕೆ?: ಜಿ.ಎಸ್. ಪಾಟೀಲರು ಅನುಭವಸಂಪನ್ನ ರಾಜಕಾರಣಿ. ಬಡವರ, ದೀನ-ದಲಿತರ ಪರ ನಿಂತ ನಾಯಕ ಎಂಬ ಹೆಸರಿದೆ. ಸಾವಿರ ಕೆರೆಗಳ ಸರದಾರ ಎಂಬ ಜನಪ್ರಿಯ ಬಿರುದು ಕೂಡ ಅವರಿಗಿದೆ. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದಾರೆ ಎಂಬ ಮಾತು ಕಾರ್ಯಕರ್ತರಲ್ಲಿ ಸಾಮಾನ್ಯ. ಇಂತಹ ನಾಯಕನಿಗೆ ಸಚಿವ ಸ್ಥಾನ ದೊರೆಯಬೇಕೆಂದು ಅಭಿಮಾನಿಗಳು ನಿರೀಕ್ಷೆ ಇಟ್ಟಿದ್ದರು. ಆದರೆ ರಾಜಕೀಯದಲ್ಲಿ ಸೇವೆ ಮಾತ್ರ ಸಾಕಾಗುವುದಿಲ್ಲ. ಒಳರಾಜಕೀಯದ ಸಮೀಕರಣಗಳು, ಪ್ರಭಾವ ಮತ್ತು ಸಮಯವೇ ಮುಖ್ಯ ಎಂಬುದನ್ನು ಈ ನೇಮಕ ಮತ್ತೆ ನೆನಪಿಸಿದೆ.

ಸಮೀಕರಣದ ನಿಜ ಮುಖ: ಗದಗ ಜಿಲ್ಲೆಯ ರಾಜಕೀಯದಲ್ಲಿ ಎಚ್.ಕೆ. ಪಾಟೀಲರ ಪ್ರಭಾವ ಎಲ್ಲರಿಗೂ ತಿಳಿದ ವಿಷಯ. ರಾಜ್ಯ ಮಟ್ಟದಲ್ಲಿ ಹಿರಿಯ ನಾಯಕತ್ವ, ಆಡಳಿತದೊಳಗಿನ ಹಿಡಿತ ಮತ್ತು ನಿರ್ಣಯಗಳಲ್ಲಿ ಅವರ ಮಾತಿನ ತೂಕ ಇವೆಲ್ಲವೂ ಜಿಲ್ಲೆಯ ರಾಜಕೀಯ ಸಮೀಕರಣಗಳನ್ನು ಬದಲಿಸುವ ಸಾಮರ್ಥ್ಯ ಹೊಂದಿವೆ. ಸಚಿವ ಸ್ಥಾನ ಹಂಚಿಕೆಯಲ್ಲಿ ಎಚ್.ಕೆ. ಪಾಟೀಲರ ಪ್ರಭಾವ ಸ್ಪಷ್ಟವಾಗಿ ಕೆಲಸ ಮಾಡಿದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ರೋಣ ಕ್ಷೇತ್ರದ ಹೋರಾಟಗಳಿಗಿಂತ ಗದಗ ರಾಜಕೀಯದ ಸಮತೋಲನವೇ ಸರ್ಕಾರದ ಅಂತಿಮ ನಿರ್ಧಾರವನ್ನು ನಿರ್ಧರಿಸಿತು ಎಂಬ ಅನುಮಾನದ ಅಭಿಪ್ರಾಯ ಬಲವಾಗುತ್ತಿದೆ.

ಸಮತೋಲನದ ಹೆಸರಿನಲ್ಲಿ ಸಮಾಧಾನ: ಸರ್ಕಾರಕ್ಕೆ ಸಚಿವ ಸಂಪುಟದಲ್ಲಿ ಜಾತಿ, ಪ್ರದೇಶ, ಪಕ್ಷದ ಒಳಸಮಾಧಾನ ಎಲ್ಲವೂ ಮುಖ್ಯ. ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಸರ್ಕಾರ ನಿಗಮ ಮಂಡಳಿ ಹುದ್ದೆಗಳ ಮೂಲಕ ಸಮಾಧಾನಪಡಿಸುತ್ತದೆ. ಆದರೆ ಈ ಸಮಾಧಾನ ಕಾರ್ಯಕರ್ತರ ಮನಸ್ಸಿಗೆ ಶಾಂತಿ ತರಬಹುದೇ ಎಂಬುದು ಪ್ರಶ್ನೆ. ಹುದ್ದೆ ನೀಡಿದರೂ ನಿರೀಕ್ಷೆ ಮುರಿದ ನೋವು ಕಡಿಮೆಯಾಗುವುದಿಲ್ಲ. ಸರ್ಕಾರಕ್ಕೆ ಇದು ರಾಜಕೀಯ ಸಮತೋಲನವಾಗಬಹುದು, ಆದರೆ ಕ್ಷೇತ್ರದ ಮಟ್ಟದಲ್ಲಿ ಇದು ಅಸಮಾಧಾನದ ಬೀಜವಾಗುವ ಸಾಧ್ಯತೆ ಇದೆ.

ಶಾಸಕರಿಗೆ ಆತ್ಮಪರಿಶೀಲನೆಯ ಸಮಯ: ಜಿ.ಎಸ್. ಪಾಟೀಲರಿಗೂ ಇದು ಮಹತ್ವದ ಕ್ಷಣ. ತಮ್ಮ ಬೆಂಬಲಿಗರ ಹೋರಾಟದ ನಡುವೆಯೂ ಸಚಿವ ಸ್ಥಾನ ಸಿಗದಿದ್ದರೆ ನಾಯಕತ್ವದ ಒಳಗಿನ ಮಾತುಕತೆಗಳಲ್ಲಿ ಎಲ್ಲಿ ಕೊರತೆ ಉಂಟಾಯಿತು ಎಂಬುದನ್ನು ಪರಿಶೀಲಿಸಬೇಕಾಗಿದೆ. ನಿಗಮ ಮಂಡಳಿ ಹುದ್ದೆಯನ್ನು ಕೇವಲ ಸಮಾಧಾನ ಹುದ್ದೆಯಾಗಿ ನೋಡುವುದೇ ಅಥವಾ ಅದನ್ನೇ ಪರಿಣಾಮಕಾರಿ ಕಾರ್ಯದ ಮೂಲಕ ತಮ್ಮ ರಾಜಕೀಯ ಬಲವಾಗಿ ರೂಪಿಸಿಕೊಳ್ಳುವುದೇ? ಎಂಬುದೇ ಮುಂದಿನ ಸವಾಲು. ಹುದ್ದೆಯನ್ನು ಸಾಧನೆಯ ವೇದಿಕೆಯಾಗಿಸಿದರೆ ಭವಿಷ್ಯದಲ್ಲಿ ಮತ್ತೆ ಅವಕಾಶ ಸಿಗಬಹುದು.

ಕಾರ್ಯಕರ್ತರಿಗೆ ಕಠಿಣ ಪಾಠ: ಭಾವನಾತ್ಮಕ ಪ್ರತಿಭಟನೆಗಳು ರಾಜಕೀಯದಲ್ಲಿ ಶಾಶ್ವತ ಫಲ ನೀಡುವುದಿಲ್ಲ. ತಲೆ ಮುಂಡಿಸುವುದು, ಆತ್ಮಹತ್ಯೆ ಯತ್ನ ಇವೆಲ್ಲವೂ ಸುದ್ದಿಯ ವಿಷಯವಾಗಬಹುದು. ಆದರೆ ನಿರ್ಧಾರಗಳ ಮೇಲೆ ಶಾಶ್ವತ ಪ್ರಭಾವ ಬೀರುವುದಿಲ್ಲ. ಪಕ್ಷದೊಳಗಿನ ಸಂಘಟನೆ ಬಲಪಡಿಸುವುದು, ತಂತ್ರಜ್ಞಾನಪೂರಿತ ಹೋರಾಟ, ನಾಯಕತ್ವದೊಂದಿಗೆ ನಿರಂತರ ಸಂವಾದ ಇವೆಲ್ಲ ಪರಿಣಾಮಕಾರಿ ಮಾರ್ಗಗಳು. ಇಲ್ಲದಿದ್ದರೆ ಕಾರ್ಯಕರ್ತರ ನೋವು ಕೇವಲ ರಾಜಕೀಯ ಸುದ್ದಿಯಾಗಿ ಉಳಿಯುತ್ತದೆ.

ಕುರ್ಚಿಗಿಂತ ಪ್ರಭಾವ ಮುಖ್ಯ: ಈ ನೇಮಕ ಸರ್ಕಾರದ ರಾಜಕೀಯ ಲೆಕ್ಕಾಚಾರದ ಸ್ಪಷ್ಟ ಉದಾಹರಣೆ. ಜಿ.ಎಸ್. ಪಾಟೀಲರ ಸೇವೆಯನ್ನು ಗೌರವಿಸುವ ಹೆಸರಿನಲ್ಲಿ ನೀಡಿದ ಹುದ್ದೆ. ಆದರೆ, ಸಚಿವ ಸ್ಥಾನಕ್ಕೆ ಹಾಕಿದ ಅಂತರದ ಗಡಿ ಎಂಬ ಸಂದೇಶವೂ ಇದೆ. ಗದಗ ಜಿಲ್ಲೆಯ ರಾಜಕೀಯದಲ್ಲಿ ಎಚ್.ಕೆ. ಪಾಟೀಲರ ಪ್ರಭಾವ ಮತ್ತೊಮ್ಮೆ ಗೋಚರಿಸಿದೆ. ಈಗ ಜಿ.ಎಸ್. ಪಾಟೀಲರು ಈ ಹುದ್ದೆಯನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದೇ ಮುಖ್ಯ. ಸರ್ಕಾರದ ಶಾಂತಿ ಮದ್ದನ್ನು ಒಪ್ಪಿಕೊಂಡು ಮೌನವಾಗುತ್ತಾರಾ ಅಥವಾ ತಮ್ಮ ಕಾರ್ಯದ ಮೂಲಕ ಮತ್ತೆ ಸಚಿವ ಸ್ಥಾನಕ್ಕಾಗಿ ರಾಜಕೀಯ ನೆಲೆ ನಿರ್ಮಿಸುತ್ತಾರಾ? ಎಂಬುದನ್ನು ಜಿಲ್ಲೆಯ ಜನ ಗಮನದಿಂದ ನೋಡುತ್ತಿದ್ದಾರೆ. ರಾಜಕೀಯದಲ್ಲಿ ಕುರ್ಚಿ ಸಿಗುವುದು ಒಂದು ಹಂತ. ಆದರೆ ಪ್ರಭಾವ ಕಟ್ಟುವುದು ನಾಯಕನ ಕೈಯಲ್ಲೇ ಇದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತು.

  • ಸಿಕಂದರ ಎಂ. ಆರಿ.
    ಪತ್ರಕರ್ತರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!