ಲಕ್ಷ್ಮೇಶ್ವರ: ಪಟ್ಟಣದಲ್ಲಿ ಆಗಾಗ್ಗೆ ಕಳ್ಳತನದ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ ರಾತ್ರಿ ವೇಳೆ ಬೈಕ್, ವಾಹನ ಸವಾರರನ್ನು ಮಾರ್ಗಮಧ್ಯೆ ತಡೆದು, ಬೆದರಿಸಿ, ಹಲ್ಲೆ ಮಾಡಿ ಹಣ ದೋಚುತ್ತಿರುವ ಘಟನೆಗಳು ನಡೆಯುತ್ತಿದ್ದು, ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.
ಕಳ್ಳರಿಂದ ನಷ್ಟ ಮತ್ತು ಹಲ್ಲೆಗೊಳಗಾದವರು ಯಾವುದೇ ದೂರು ನೀಡದ್ದರಿಂದ ಪೊಲೀಸ್ ಠಾಣೆಯಲ್ಲಿ ಇಂತಹ ಪ್ರಕರಣ ದಾಖಲಾಗಿಲ್ಲವೆನ್ನಲಾಗಿದೆ.
ಪಟ್ಟಣದಿಂದ ಹರದಗಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಯಾರೋ ನಾಲ್ಕು ಜನ ನಿಂತು ವಾಹನಗಳನ್ನು ತಡೆದು ಹಲ್ಲೆ ನಡೆಸಿ, ಹಣ ದೋಚುತ್ತಿದ್ದಾರೆ ಎಂಬ ಆರೋಪ ಕೆಲ ದಿನಗಳಿಂದ ಕೇಳಿಬರುತ್ತಿದೆ.
ಪಟ್ಟಣದ ಮುಖ್ಯ ಬಜಾರ್, ಹೊಸ ಬಸ್ ನಿಲ್ದಾಣದಲ್ಲಿ ಹಣ ಮತ್ತು ಸರಗಳ್ಳತನದ ಘಟನೆಗಳು ನಡೆಯುತ್ತಿವೆ. ಇತ್ತೀಚೆಗೆ ಹರದಗಟ್ಟಿ ರಸ್ತೆಯಲ್ಲಿ ಬೈಕ್ ಸವಾರನೋರ್ವನನ್ನು ತಡೆದ ನಾಲ್ಕು ಜನರು ಅವರಿಂದ ಒಂದಷ್ಟು ಹಣ ಕಸಿದುಕೊಂಡು, ಹೊಡೆದು, ಪೊಲೀಸರಿಗೆ ಹೇಳಿದರೆ ಸಾಯಿಸಿಬಿಡ್ತೀವಿ ಎಂದು ಹೆದರಿಸಿ ಕಳಿಸಿದ್ದಾರೆ ಎಂಬ ವದಂತಿಗಳು ಹಬ್ಬಿದ್ದು, ಇಂತಹ ಘಟನೆಗಳ ಬಗ್ಗೆ ಸುದ್ದಿಗಳನ್ನು ಕೇಳಿದ ಸಾರ್ವಜನಿಕರು ಆತಂಕ್ಕೀಡಾಗಿದ್ದಾರೆ.
ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವಿಶೇಷ ನಿಗಾ ವಹಿಸುವ ಮೂಲಕ ಸಾರ್ವಜನಿಕರಲ್ಲಿನ ಭಯ ದೂರ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ರಸ್ತೆ ಮಧ್ಯೆ ವಾಹನಗಳನ್ನು ಅಡ್ಡಗಟ್ಟಿ ಕಳ್ಳತನ ಮತ್ತು ಹಲ್ಲೆ ಮಾಡಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ. ಆದಾಗ್ಯೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ರಾತ್ರಿ ವೇಳೆ ವಿಶೇಷ ಗಸ್ತು ಸಿಬ್ಬಂದಿ ನೇಮಿಸುತ್ತೇವೆ. ಇಂತಹ ಘಟನೆಗಳಿಂದ ತೊಂದರೆಗೊಳಗಾದವರು ಠಾಣೆಗೆ ಬಂದು ದೂರು, ಮಾಹಿತಿ ನೀಡಿದರೆ ಅನೂಕೂಲವಾಗುತ್ತದೆ. ಅಲ್ಲದೆ ೧೧೨ಗೆ ಕರೆ ಮಾಡಿದರೆ ನಮ್ಮ ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ದೌಡಾಯಿಸುತ್ತಾರೆ.
-ನಾಗರಾಜ್ ಮಾಡಳ್ಳಿ, ಸಿಪಿಐ, ಶಿರಹಟ್ಟಿ