ಗದಗ: ಲಕ್ಕುಂಡಿಯ ಪುರಾತನ ನೆಲದೊಳಗೆ ಅಡಗಿರುವ ಇತಿಹಾಸ ಈಗ ಒಂದೊಂದಾಗಿ ಹೊರಬರುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಇಂದು (ಜ.21) ಉತ್ಖನನದ 6ನೇ ದಿನದ ಕಾರ್ಯದಲ್ಲಿ ಹಸಿರು ಬಣ್ಣದ ನಾಗರಶಿಲೆ, ಸುಟ್ಟ ಮಣ್ಣಿನ ಬಿಲ್ಲೆ ಹಾಗೂ ಮೂಳೆಯ ತುಂಡುಗಳು ಪತ್ತೆಯಾಗಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಹಸಿರು ಬಣ್ಣದ ನಾಗರಶಿಲೆ ಪತ್ತೆಯಾಗಿರುವುದು ವಿಶೇಷ ಗಮನ ಸೆಳೆದಿದ್ದು, ಇದು ಖಜಾನೆ (ನಿದಿ) ಇರುವ ಸೂಚನೆ ಇರಬಹುದೆಂಬ ಮಾತುಗಳು ಸ್ಥಳೀಯರಲ್ಲಿ ಹರಡಿವೆ. ಇದರಿಂದ ಉತ್ಖನನ ಸ್ಥಳದ ಸುತ್ತ ಜನರ ಆಸಕ್ತಿ ಮತ್ತಷ್ಟು ಹೆಚ್ಚಾಗಿದೆ.
01ನೇ ಬ್ಲಾಕ್‌ನಲ್ಲಿ ಪತ್ತೆಯಾದ 6-7 ಚಿಕ್ಕ ಮೂಳೆ ತುಂಡುಗಳನ್ನು ಅಧಿಕಾರಿಗಳು ಜಾಗ್ರತೆಯಿಂದ ಪ್ಲಾಸ್ಟಿಕ್ ಪ್ಯಾಕೇಟ್‌ನಲ್ಲಿ ಸೀಲ್ ಮಾಡಿ ಸಂಗ್ರಹಿಸಿದ್ದಾರೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದು, ಈ ಮೂಳೆಗಳು ಮಾನವರದ್ದಾ, ಪ್ರಾಣಿಗಳದ್ದಾ ಅಥವಾ ಪಕ್ಷಿಗಳದ್ದಾ ಎಂಬುದು ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ.
ನಿನ್ನೆ (ಜ.20) ಶಿವಲಿಂಗದ ಪಾಣಿಪೀಠದ ಸಂಪೂರ್ಣ ಭಾಗ ಹೊರತೆಗೆಯಲಾಗಿದ್ದು, ದೊಡ್ಡ ಮಡಿಕೆಯ ಒಂದು ಭಾಗವೂ ಪತ್ತೆಯಾಗಿತ್ತು. ಇವತ್ತು ಸುಮಾರು 6 ಅಡಿ ಆಳಕ್ಕೆ ಅಗೆದಿದ್ದು, ಭೂಮಿಯೊಳಗೆ ಇನ್ನೂ ಹಲವು ಅವಶೇಷಗಳು ಅಡಗಿರುವ ಸಾಧ್ಯತೆ ಹೆಚ್ಚಿದೆ.
ಒಟ್ಟಿನಲ್ಲಿ, ಲಕ್ಕುಂಡಿಯ ಉತ್ಖನನ ಕಾರ್ಯ ದಿನದಿಂದ ದಿನಕ್ಕೆ ಹೊಸ ರಹಸ್ಯಗಳನ್ನು ಹೊರಹಾಕುತ್ತಿದ್ದು, ಇತಿಹಾಸ ಪ್ರೇಮಿಗಳು ಹಾಗೂ ಸಾರ್ವಜನಿಕರಲ್ಲಿ ಅಪಾರ ಕುತೂಹಲ ಮೂಡಿಸಿದೆ.



