ಬೆಂಗಳೂರು: ಬೆಂಗಳೂರಿನಲ್ಲಿ ಕಾರಿನ ಹಿಂಭಾಗದಲ್ಲಿ ಬೆದರಿಕೆಯ ಬರಹ ಬರೆದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
KA03 AN 6207 ನೋಂದಣಿ ಸಂಖ್ಯೆಯ ಕಾರಿನ ಹಿಂಭಾಗದಲ್ಲಿ “This vehicle belongs to mafia. If you touch this, we touch you” ಎಂಬ ಇಂಗ್ಲಿಷ್ ಭಾಷೆಯ ಬೆದರಿಕೆ ಸಾಲುಗಳನ್ನು ಬರೆಯಲಾಗಿದೆ. ಅಂದರೆ, “ಈ ಕಾರು ಮಾಫಿಯಾಗೆ ಸೇರಿದ್ದು, ಇದನ್ನು ಸ್ಪರ್ಶಿಸಿದರೆ ನಾವು ನಿಮ್ಮನ್ನು ಸ್ಪರ್ಶಿಸುತ್ತೇವೆ” ಎಂಬ ಅರ್ಥದ ಸಂದೇಶ ಇದಾಗಿದೆ.
ಈ ಕಾರಿನ ಫೋಟೋವನ್ನು ‘X Responsibility’ ಎಂಬ ಸಾಮಾಜಿಕ ಜಾಲತಾಣದ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, “ಬೆಂಗಳೂರಿನ ಬೀದಿಗಳನ್ನು ಮಾಫಿಯಾ ಆಳುತ್ತಿದೆಯೇ?” ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಈ ವಿಷಯ ವೈರಲ್ ಆಗುತ್ತಿದ್ದಂತೆ ನಗರ ಪೊಲೀಸರು ತಕ್ಷಣ ಸ್ಪಂದಿಸಿದ್ದು, ಕಾರು ಕಂಡುಬಂದ ಸ್ಥಳದ ಕುರಿತು ಸಾರ್ವಜನಿಕರಿಂದ ಮಾಹಿತಿ ಕೋರಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ, ಕಾರಿನ ಮಾಲೀಕ ಹಾಗೂ ಬರಹ ಬರೆದ ವ್ಯಕ್ತಿಯ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



