ಭಕ್ತರ ಇಷ್ಟಾರ್ಥಗಳ ಪೂರೈಸುವುದೇ ಇಷ್ಟಲಿಂಗ ಪೂಜೆ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಲಿಂಗಾಯತ ಸಮುದಾಯಕ್ಕೆ ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದ್ದು, ಮನುಷ್ಯನ ಮನಸ್ಸನ್ನು ಶುದ್ಧೀಕರಿಸುವುದಕ್ಕಾಗಿ ಈ ಮಾಸದಲ್ಲಿ ಪ್ರವಚನ ಆಲಿಸಬೇಕು, ದಾಸೋಹ ಮಾಡಬೇಕು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥ ಸೇವೆಯನ್ನು ಮಾಡಬೇಕು. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವುದೇ ಇಷ್ಟಲಿಂಗ ಪೂಜೆಯ ಮಹತ್ವವಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಅವರು ಬುಧವಾರ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

ಶಿವತತ್ವ, ಶಿವಚಿಂತನೆ ಮಾಡುವ ಮೂಲಕ ಶ್ರಾವಣ ಮಾಸವನ್ನು ಆಚರಣೆ ಮಾಡಿದಾಗ ಬದುಕು ಸುಧಾರಣೆಯಾಗಲಿದೆ. ಲಿಂಗ ಜಾತಿ ಅಲ್ಲ, ಜ್ಯೋತಿ. ಗಂಡು-ಹೆಣ್ಣು ಭೇದವಿಲ್ಲ, ಹುಟ್ಟಿನಿಂದ ಸಾವಿನವರೆಗೂ ನಮ್ಮ ಜೊತೆ ಬರುವುದು ಲಿಂಗ ಮಾತ್ರ. ಇದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿನಿತ್ಯ ಇಷ್ಟಲಿಂಗ ಪೂಜೆ ಮಾಡುವುದರಿಂದ ಅವರ ಸ್ಮರಣಶಕ್ತಿ, ಏಕಾಗ್ರತೆ ಹೆಚ್ಚುತ್ತದೆ. 246 ವರ್ಷಗಳ ಹಿಂದೆ ಬ್ರೀಟಿಷರೊಡನೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಚೆನ್ನಮ್ಮಾಜಿ ನಮ್ಮ ಸಮಾಜದ ಅಭಿಮಾನ. ಚೆನ್ನಮ್ಮಾಜಿ ತ್ರಿಕಾಲ ಲಿಂಗಪೂಜೆಯನ್ನು ಮಾಡುತ್ತಿದ್ದರು, ಅವರ ಜೊತೆಗೆ ಅಕ್ಕಮಹಾದೇವಿ, ಬೆಳವಡಿ ಮಲ್ಲಮ್ಮ ನಮ್ಮ ಸಮಾಜದ ಹೆಮ್ಮೆ ಎಂದರು.

ಮುಂಬರುವ ದಿನಗಳಲ್ಲಿ ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕುಗಳಲ್ಲಿ ವಾಸ್ತವ್ಯ ಮಾಡಿ ಸಮಾಜದ ಸಂಘಟನೆ ಮಾಡಲಾಗುವುದು. ಜೊತಗೆ ಬೃಹತ್ ಸಮಾವೇಶಗಳನ್ನು ಆಯೋಜಿಸಿ ರಾಜ್ಯಮಟ್ಟದ ನಾಯಕರುಗಳನ್ನು ಕರೆಯಿಸಿ ಮೀಸಲಾತಿ ಹೋರಾಟಕ್ಕೆ ನಮ್ಮ ಶಕ್ತಿ ಪ್ರದರ್ಶನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.

ಇದಕ್ಕೂ ಮುನ್ನ ಕೊಟ್ರೇಶ ಅಕ್ಕೂರ ಇವರ ಮಹಾಮನೆಯಲ್ಲಿ ಶ್ರೀಗಳಿಂದ ವಿಶೇಷ ಪೂಜೆ ನೆರವೇರಿತು. ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿದರು. ಪಂಚಮಸಾಲಿ ಸಂಘದ ತಾಲೂಕಾಧ್ಯಕ್ಷ ಬಿ.ಡಿ. ಪಲ್ಲೇದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಿಜೆಪಿ ಮಂಡಲಾಧ್ಯಕ್ಷ ಸುನೀಲ ಮಹಾಂತಶೆಟ್ಟರ, ಸಿ.ಆರ್. ಪಾಟೀಲ, ಎಸ್.ಎಸ್. ಪಾಟೀಲ, ಚನ್ನವೀರಗೌಡ ತೆಗ್ಗಿನಮನಿ, ಅಶೋಕ ಬಳ್ಳಾರಿ, ದೇವರಾಜ ಮೇಟಿ, ಫಕ್ಕೀರೇಶ ಎಮ್ಮಿಯವರ, ಶೇಖರ ಹೈದರಿ, ಬಸವರಾಜ ಸಾಲಿ, ವಸಂತಗೌಡ ಪಾಟೀಲ, ಚನ್ನಬಸವನಗೌಡ ಪಾಟೀಲ, ಶಿವಪುತ್ರಪ್ಪ ನೆಲಗುಡ್ಡದ, ವಿಶ್ವನಾಥ ದಲಾಲಿ, ನಾಗರಾಜ ಗಡ್ಡಿ, ಬಸನಗೌಡ ಪಾಟೀಲ, ನಂದಾ ಪಲ್ಲೇದ, ಮುತ್ತಣ್ಣ ತೋಟದ, ಅಶೋಕ ವರವಿ, ಮಂಜು ಉಳ್ಳಾಗಡ್ಡಿ, ಸುರೇಶ ವರವಿ, ಮಹೇಶ ವರವಿ, ಮಹಾದೇವಪ್ಪ ಅಣ್ಣಿಗೇರಿ, ಗಂಗಾಧರ ಮೆಣಸಿನಕಾಯಿ, ಕಾಶಣ್ಣ ಗಿಡ್ಡವೀರಪ್ಪನವರ ಮುಂತಾದವರು ಉಪಸ್ಥಿತರಿದ್ದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಕೂಡಲಸಂಗಮದಿಂದ ಬೃಹತ್ ಪಾದಯಾತ್ರೆ ಮಾಡಿದ್ದು, ಇಡೀ ಜಗತ್ತಿಗೆ ಸಮಾಜದ ಸಂಘಟನೆಯನ್ನು ತೋರಿಸಿದಂತಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿಯೇ ಮೀಸಲಾತಿ ನೀಡಬೇಕಿತ್ತು. ಕೋವಿಡ್‌ನಿಂದ ಅದು ಸಾಧ್ಯವಾಗಲಿಲ್ಲ. ತದನಂತರ ಬಂದ ಸರಕಾರಕ್ಕೆ ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ 2ಎ ಮೀಸಲಾತಿ ಪಡೆಯಲು ಹೋರಾಟ ಮಾಡಲಾಗುತ್ತಿದೆ. ಸಮಾಜಕ್ಕೆ ಮೀಸಲಾತಿ ದೊರಕುವವರೆಗೂ ಹೋರಾಟ ಕೈಬಿಡುವುದಿಲ್ಲ.

– ಜ. ಬಸವಜಯ ಮೃತ್ಯುಂಜಯ ಸ್ವಾಮೀಜಿ.

ಕೂಡಲಸಂಗಮ.


Spread the love

LEAVE A REPLY

Please enter your comment!
Please enter your name here